

ರಾಣೆಬೆನ್ನೂರ: ತಾಲೂಕಿನ ಕುಪ್ಪೇಲೂರ ಗ್ರಾಮದ ಹಳೆಯ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ಡಿಎಚ್‌ಒ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಸ್ಪತ್ರೆ ಸ್ಥಳಾಂತರ ಮಾಡಲಾಗಿದೆ. ಆದರೆ, ಹಳೆಯ ಕಟ್ಟದಲ್ಲಿರುವ ಸಲಕರಣೆಗಳು, ದಾಖಲಾತಿಗಳು ಹಾಳಾಗಿ ಹೋಗಿವೆ. ಸಾರ್ವಜನಿಕರು ಹೊಸ ಆಸ್ಪತ್ರೆಗೆ ಬಂದು ಯಾವುದಾದರೂ ಹಳೆಯ ದಾಖಲೆಗಳನ್ನು ಕೇಳಿದರೆ ಹಳೆ ಕಟ್ಟಡಕ್ಕೆ ಹೋಗಿ ನೀವೇ ಹುಡುಕಿಕೊಳ್ಳಿ ಎನ್ನುತ್ತಿದ್ದಾರೆ. ಸರ್ಕಾರದಲ್ಲಿ ಇರುವಂತಹ ಅಧಿಕಾರಿ ವರ್ಗದವರು ನಮ್ಮ ತೆರಿಗೆ ಹಣದಲ್ಲಿ ಕಟ್ಟಿದಂತಹ ಆಸ್ಪತ್ರೆ ಮತ್ತು ದಾಖಲಾತಿಗಳು ಸರಿಯಾಗಿ ಇಟ್ಟುಕೊಳ್ಳದಿರುವುದು ಸರಿಯಲ್ಲ.
ಆದ್ದರಿಂದ ಅಲ್ಲಿಯ ಸಿಬ್ಬಂದಿ ವರ್ಗದ ಮೇಲೆ ಸೂಕ್ತ ತನಿಖೆ ನಡೆಸಿ ನಿರ್ಲಕ್ಷೃ ತೋರಿಸುತ್ತಿರುವ ಅಧಿಕಾರಿಗಳ ಮೇಲೆ ಕೇಸು ದಾಖಲು ಮಾಡಿ ಅವರನ್ನು ಬೇರೆ ಕಡೆ ವರ್ಗಾಯಿಸಬೇಕು. ತಾವು ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಕುಪ್ಪೇಲೂರು ಗ್ರಾಮದಿಂದ ರಾಣೆಬೆನ್ನೂರ ಇಲಾಖೆಯ ಅಧಿಕಾರಿಗಳ ಮುಖ್ಯ ಕಚೇರಿವರೆಗೆ ಬೈಕ್ ರ‌್ಯಾಲಿ ಕೈಗೊಂಡು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಶಿವಕುಮಾರ ಜಾಧವ, ಸಿದ್ಧಾರೂಢ ಗುರುಂ, ಗೋಪಿ ಕುಂದಾಪುರ, ಪಾಲಕ್ಷಪ್ಪ ಕಡೇಮನಿ, ಚಂದ್ರಪ್ಪ ಬಣಕಾರ, ವಿಜಯ ಮಿಳ್ಳಿ, ಪ್ರೇಮಾ ಅಂಗಡಿ, ಸಂತೋಷ ಯಡಚಿ, ಪರಶುರಾಮ ಕುರವತ್ತಿ, ಬಸವರಾಜ ದಳವಾಯಿ, ಸಂತೋಷ ಕನಪ್ಪಳ್ಳವರ ಮತ್ತಿತರರು ಇದ್ದರು.