ಸ್ಕೂಟಿಯಲ್ಲೇ ಕುಂಭಮೇಳ, ಕಾಶಿ, ಅಯೋಧ್ಯೆ ಯಾತ್ರೆ!

kumbhamela
ಕುಂಭಮೇಳದಲ್ಲಿ ಮೋಹನ್ ನಾಯ್ಕ.
Published on

ಆಯನೂರು: ಆಯನೂರಿನ 49 ವರ್ಷದ ಮೋಹನ್ ನಾಯ್ಕ ಸ್ಕೂಟಿಯಲ್ಲೇ 8 ದಿನಗಳ ಕಾಲ ಕುಂಭಮೇಳ, ಕಾಶಿ, ಆಯೋಧ್ಯೆ ಯಾತ್ರೆ ಮಾಡಿ ಗ್ರಾಮಕ್ಕೆ ಹಿಂದಿರುಗಿದ್ದಾರೆ. ೆ.5ರಂದು ರಾತ್ರಿ ಯಾತ್ರೆ ಆರಂಭಿಸಿದ್ದ ಇವರು 12ರಂದು ರಾತ್ರಿ ಗ್ರಾಮಕ್ಕೆ ವಾಪಸಾಗಿದ್ದಾರೆ.

ಪೆಟ್ರೋಲ್‌ಗೆ 10 ಸಾವಿರ, ಇಬ್ಬರಿಂದ ಊಟ ಹಾಗೂ ಇತರೆ ಖರ್ಚು 15 ಸಾವಿರ ರೂ. ವೆಚ್ಚ ಆಗಿರುವುದಾಗಿ ತಿಳಿಸಿದ್ದಾರೆ. ಸ್ಕೂಟಿಯಲ್ಲಿ ಒಂದು ಬ್ಯಾಗ್, ಬೆಡ್ ಶೀಟ್, ಬಟ್ಟೆ ಮಾತ್ರ ತೆಗೆದುಕೊಂಡು ಹೊರಟು ಒಟ್ಟು 4844 ಕಿ.ಮೀ ಪಯಣಿಸಿದ್ದಾರೆ. ಮೊದಲಿಗೆ ಚಿತ್ರದುರ್ಗ, ಅನಂತಪುರ, ಹೈದರಾಬಾದ್, ನಾಗ್ಪುರ, ರೇವ ಮೂಲಕ 3 ದಿನಗಳಲ್ಲಿ ಕುಂಭಮೇಳ ತಲುಪಿದ್ದಾರೆ. ಅಲ್ಲಿ ಪೂಜೆ ಮುಗಿಸಿಕೊಂಡು ಕಾಶಿ ದರ್ಶನ ಮಾಡಿದ್ದಾರೆ. ನಂತರ ಅಯೋಧ್ಯೆ ರಾಮಲಲ್ಲಾ ಮಂದಿರಕ್ಕೆ ಹೋಗಿದ್ದಾಗಿ ಮೋಹನ್ ನಾಯ್ಕ ತಿಳಿಸಿದರು.

ರಾತ್ರಿಯಡೀ ಪ್ರಯಾಣ ಮಾಡುತ್ತಿದ್ದೆವು. ನಿದ್ದೆ ಬಂದಾಗ ವಿಶ್ರಾಂತಿ ಪಡೆಯುತ್ತಿದ್ದೆವು. ಯಾತ್ರೆಯಲ್ಲಿ 16 ವರ್ಷದ ಮೊಮ್ಮಗ ನಿರಂಜನ್ ಸಾಥ್ ನೀಡಿದ್ದಾನೆ. ಕೆಲವೆಡೆ ಹೋಟೆಲ್‌ಗಳಲ್ಲಿ ಊಟಕ್ಕೆ ಹಣ ಪಡೆದಿಲ್ಲ. ಕುಂಭಮೇಳಕ್ಕೆ ಹೋಗಲು 8 ಕಿ.ಮೀ ಹಿಂದೆಯೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಪವಿತ್ರ ಸ್ನಾನದ ನಂತರ 3 ತಾಸು ಸರದಿ ಸಾಲಲ್ಲಿ ನಿಂತು ದೇವರ ದರ್ಶನ ಮಾಡಲಾಯಿತು. ಕಾಶಿಯಲ್ಲಿ ಸ್ನಾನಕ್ಕೆ 100 ರೂ. ನೀಡಿ ಬೋಟ್‌ನಲ್ಲಿ ಹೋಗಬೇಕು. 70 ರೂ. ರಸೀದಿ ಪಡೆದು ದೇವರ ದರ್ಶನ ಮಾಡಲಾಯಿತು. ನಂತರ ಆಯೋಧ್ಯೆ ಪಯಣ. ಇಲ್ಲಿ ದೇವರ ದರ್ಶನಕ್ಕೆ ಹಣ ಪಡೆಯದೆ ದರ್ಶನ ನೀಡಲಾಗುತ್ತದೆ. ಕುಂಭಮೇಳದಲ್ಲಿ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಊಟ ಸಿಗಲಿಲ್ಲ. ಹೀಗಾಗಿ ಹೋಟೆಲ್‌ಗಳಲ್ಲಿ ಊಟ ಮಾಡಿದೆವು. ಕುಂಭಮೇಳಕ್ಕೆ ಹೋಗಲೇಬೇಕೆಂದು ತೀರ್ಮಾನಿಸಿದಾಗ ಮನೆಯವರು ಸ್ಕೂಟಿಯಲ್ಲಿ ಹೋಗುವುದು ಬೇಡ ಎಂದಿದ್ದರು. ಮಾರ್ಗದುದ್ದಕ್ಕೂ ಜನರಿಂದ ಒಳ್ಳೆಯ ಸಹಕಾರ ಸಿಕ್ಕಿತು. ದೇವರ ದಯೆಯಿಂದ ಎಲ್ಲಿಯೂ ಸಮಸ್ಯೆ ಆಗಲಿಲ್ಲ ಎಂದು ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net