

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭೂತಪೂರ್ವ ಗೆಲುವು, ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಪ್ರಜ್ವಲ್ ಪ್ರಕರಣದ ಮುಜುಗರಕ್ಕೆ ಮುಸುಕೆಳೆದಂತಾಗಿದೆ.
ಎಸ್ಐಟಿ ತನಿಖೆ ಮುಂದುವರಿಸಿದ್ದರೂ ಜೆಡಿಎಸ್ ನಾಯಕರು ಪ್ರಕರಣದಿಂದ ಆಗುತ್ತಿದ್ದ ಕಿರಿಕಿರಿಯಿಂದ ತುಸು ಮಟ್ಟಗೆ ಪಾರಾಗಿದ್ದಾರೆ. ದಿನ ಬೆಳಗಾದರೆ ಪ್ರಜ್ವಲ್ ಪ್ರಕರಣ ಮುಂದಿಟ್ಟು ಜೆಡಿಎಸ್ ಮತ್ತು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಕಾಂಗ್ರೆಸ್ ಕೂಡ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಂತಿದೆ.
ಜೆಡಿಎಸ್ ಕತೆ ಇನ್ನೇನು ಮುಗಿಯಿತು ಎಂಬ ಆರೋಪದ ನಡುವೆಯೇ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಮೈಕೊಡವಿ ಎದ್ದಿದೆ. ಇದರಿಂದ ರಾಜ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಂತಾಗಿದೆ.
ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗುತ್ತಿರುವುದು ಕೇವಲ ಜೆಡಿಎಸ್ಗೆ ಮಾತ್ರವಲ್ಲ, ಬಿಜೆಪಿಗೂ ದೊಡ್ಡ ಬಲ ತಂದುಕೊಟ್ಟಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಐದಾರು ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿನಲ್ಲಿ ಜೆಡಿಎಸ್ ಪಾತ್ರ ನಿಚ್ಚಳವಾಗಿದೆ. ಇದು ಬಿಜೆಪಿ ರಾಜ್ಯ ನಾಯಕರಿಗೆ ಮಾತ್ರವಲ್ಲ, ಕೇಂದ್ರ ನಾಯಕರಿಗೂ ಮನದಟ್ಟಾಗಿದೆ. ಹಾಗಾಗಿ ಎರಡೇ ಸ್ಥಾನ ಗೆದ್ದರೂ ಕುಮಾರಸ್ವಾಮಿಗೆ ಬಿಜೆಪಿ ಸಚಿವ ಸಂಪುಟ ಸ್ಥಾನದ ಕೊಡುಗೆ ಕೊಟ್ಟಿದೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಮಾಡಿದ ಕಮಾಲ್ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಇನ್ನೂ ಭದ್ರ ನೆಲೆ ಇದೆ ಎಂಬುದನ್ನು ಋಜುವಾತುಪಡಿಸಿದೆ. ಹಾಗಾಗಿ ಹಳೇ ಮೈಸೂರು ಭಾಗದ ಜೆಡಿಎಸ್ ನಾಯಕರಲ್ಲಿ ಆತ್ಮವಿಶ್ವಾಸ ಗರಿಗೆದರಿದೆ.
ಮುಂದಿನ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯುವ ಸುಳಿವನ್ನು ಈಗಾಗಲೇ ಉಭಯ ಪಕ್ಷಗಳ ನಾಯಕರು ವ್ಯಕ್ತಪಡಿಸಿರುವುದರಿಂದ ಆಡಳಿತ ಕಾಂಗ್ರೆಸ್ನಲ್ಲಿ ತಳಮಳ ಶುರುವಾಗಿರುವುದೂ ಸುಳ್ಳಲ್ಲ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಬಸವಳಿದಿದ್ದ ಜೆಡಿಎಸ್ಗೆ ಲೋಕಸಭೆ ಚುನಾವಣಾ ಲಿತಾಂಶ ಹೊಸಕಳೆ ತಂದುಕೊಟ್ಟಿದೆ.
ಕುಮಾರಸ್ವಾಮಿ ಕೇಂದ್ರ ಸರ್ಕಾರದಲ್ಲಿ ಮಹತ್ವದ ಹುದ್ದೆಗೇರುವುದರಿಂದ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ಉಂಟಾಗಿದೆ. ಲೋಕಸಭೆ ಚುನಾವಣೆ, ಪ್ರಜ್ವಲ್ ಪ್ರಕರಣದಲ್ಲಿ ಕೆಸರೆರಚಾಟದ ರಾಜಕಾರಣ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗುತ್ತಿರುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗಿದೆ. ಕೇಂದ್ರದ ಜತೆ ವ್ಯವಹರಿಸಬೇಕಾದಲ್ಲಿ ಕುಮಾರಸ್ವಾಮಿ ಮಧ್ಯಸ್ಥಿಕೆಯ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆಗಳೂ ಇದ್ದು, ಈ ಸವಾಲನ್ನು ಕಾಂಗ್ರೆಸ್ ನಾಯಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿಯಾಗಿದೆ.