ಬಸ್ ಪ್ರಯಾಣ ಏರಿಕೆಗೆ ಎಚ್.ಡಿ.ಕುಮಾರಸ್ವಾಮಿ ಕಿಡಿ|outraged by bus fare hike

HD Kumaraswamy
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿರುವುದಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(Kumaraswamy outraged by bus fare hike) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದಾಗಿನಿಂದ ಈ ಸರ್ಕಾರ ಜನರ ಮೇಲೆ ಬರೆ ಎಳೆಯುವುದು, ಅದನ್ನು ಜನರೂ ಭರಿಸಿಕೊಂಡು ಹೋಗುವುದು ಮಾಮೂಲಿ ಆಗಿಬಿಟ್ಟಿದೆ ಎಂದು ಹರಿಹಾಯ್ದರು.

ಈ ರಾಜ್ಯದಲ್ಲಿ ಸರ್ಕಾರ ಇದೆಯಾ? ಇದನ್ನು ಸರ್ಕಾರ ಎಂದು ಕರೆಯುತ್ತಾರಾ? ಈ ಸರ್ಕಾರ ಬಂದಾಗಿನಿಂದ ಬರೀ ಬೆಲೆ ಏರಿಕೆ ಮಾಡುವುದೇ ಆಗಿದೆ ಎಂದು ಕಿಡಿಕಾರಿದರು.

ನಮ್ಮ ರಾಜ್ಯದಲ್ಲಿ ದರ ಏರಿಕೆ, ಬೆಲೆ ಏರಿಕೆ ಎನ್ನುವುದು ಅಚ್ಚರಿಯ ವಿಷಯ ಅಲ್ಲ. ಸರ್ಕಾರ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿ ಜನರ ಮೇಲೆ ದೊಡ್ಡ ಬರೆ ಹಾಕಿದೆ. ಜನರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೂ ಅಭ್ಯಾಸವಾಗಿ ಹೋಗಿದೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸಿ ಮೂರನೇ ದಿನ ಮರೆತು ಹೋಗಿ ಪ್ರಯಾಣ ದರ ಏರಿಕೆಗೇ ಅಡ್ಜೆಸ್ಟ್ ಆಗುತ್ತಾರೆ. ಇದು ನೈಜ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿಯಿಂದ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ

ಇದೇ ಕಾಂಗ್ರೆಸ್ ಸರ್ಕಾರ ಡಿಸೇಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿತ್ತು. ಜನರು ಪ್ರತಿಭಟನೆ ಮಾಡಿದರೆ? ಇಲ್ಲ, ಅದಕ್ಕೆ ಅಡ್ಜೆಸ್ಟ್ ಆದರು. ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿದರು. ಗೈಡ್ ಲೈನ್ಸ್ ವ್ಯಾಲ್ಯೂ, ಮದ್ಯದ ದರವನ್ನು ಏರಿಕೆ ಮಾಡಿದರು. ಹಾಲಿನ ದರವನ್ನು ಏರಿಕೆ ಮಾಡುತ್ತಾರಂತೆ. ಈಗ ನೀರಿನ ದರವೂ ಏರಿಕೆ ಆಗುತ್ತದೆ ಎನ್ನುವ ಮಾಹಿತಿ ಬರುತ್ತಿದೆ. ಎಲ್ಲ ದರಗಳನ್ನು ಸರ್ಕಾರ ಏರಿಕೆ ಮಾಡುತ್ತಿದೆ. ಆದರೆ, ಗ್ಯಾರಂಟಿ ಸಂತೋಷದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿಲ್ಲ, ಪ್ರತಿಭಟನೆ ಮಾಡುತ್ತಿಲ್ಲ. ಬೆಲೆ ಏರಿಕೆಗೆ ಜನರ ಸಮ್ಮತಿ ಇದೆ ಎಂದು ಸರ್ಕಾರ ಭಾವಿಸಿದಂತಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಈ ಸರ್ಕಾರ ಬಂದ ದಿನದಿಂದ ಇದೇ ನಡೆಯುತ್ತಿದೆ. ಸಂಕ್ರಾಂತಿ ಕಳೆಯಲಿ, ಆಮೇಲೆ ಈ ಸರ್ಕಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net