ಗ್ಯಾರಂಟಿ ಸಮೀಕ್ಷೆಗೆ ಕುಮಾರಸ್ವಾಮಿ ಕಿಡಿ

HD Kumaraswamy (1)
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಗ್ಯಾರಂಟಿಗಳ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಖರಿಯನ್ನು ಲಜ್ಜೆಗೇಡಿತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಹಿಳೆಯರಿಗೆ ‘ಗ್ಯಾರಂಟಿ ಸ್ವಯಂ ಸೇವಕರು’ ಎಂದು ಹೆಸರು. ಹಾಗಾದರೆ, ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿ ತಮಗೆ ಬೇಕುಬೇಕಾದ ಸಂಸ್ಥೆಗಳಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಸುರಿದ ಜನರ ತೆರಿಗೆ ಹಣ ಎಲ್ಲಿಗೆ ಹೋಯಿತು? ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಾಧಿಕಾರ ಏನು ಕಿಸಿಯುತ್ತಿದೆ?:

ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರಿಗೆ ಸಂಪುಟದರ್ಜೆ ಕೊಟ್ಟು ರಚಿಸಲಾಗಿರುವ ‘ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ ಏನು ಕಿಸಿಯುತ್ತಿದೆ? ಜಿಲ್ಲೆ, ತಾಲೂಕು, ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಸಮೀಕ್ಷೆ ಮಾಡುತ್ತಿಲ್ಲವೇ? ಗ್ಯಾರಂಟಿ ಅನುಷ್ಠಾನ ನಿರ್ವಹಣೆಗೆ ವಾರ್ಷಿಕ 16 ಕೋಟಿ ರೂ. ವೆಚ್ಚ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ, ಇದಕ್ಕೆ ಹೋಗುತ್ತಿರುವ ವೇತನ, ಭತ್ಯೆಗಳೆಲ್ಲ ವ್ಯರ್ಥವೇ? ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಕಾರ್ಯಕರ್ತೆಗೆ 120ರಿಂದ 150 ಮನೆ ಹಂಚಿಕೆ ಮಾಡಿದ್ದು, 1015 ದಿನದಲ್ಲಿ ಸಮೀಕ್ಷೆ ಮುಗಿಸಬೇಕಿದೆ. ಬೆಳಗ್ಗೆ 9 ರಿಂದ ಸಂಜೆ 4ರವರೆಗೂ ಉರಿಬಿಸಿಲಿನಲ್ಲಿ ಮಾಡುವ ಈ ಕೆಲಸಕ್ಕೆ ಅವರಿಗೆ ಸಿಗುವ ಗೌರವಧನ ಕೇವಲ 1,000ರೂ.! ಅದೇ ‘ಎಸಿ ರೂಂ ಸಮೀಕ್ಷೆ ಗಿರಾಕಿ’ಗಳಿಗೆ ಕೋಟಿ ಕೋಟಿ ಹಣ ಹೋಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಪಟ್ಟು-ಮಟ್ಟು-ಒಳಗುಟ್ಟು:

ಜನರ ತೆರಿಗೆ ಹಣದಿಂದಲೇ ಗ್ಯಾರಂಟಿ ಸಮಾವೇಶಗಳನ್ನು (ಇವು ಚುನಾವಣಾ ಪ್ರಚಾರ ಸಭೆಗಳು) ಸಾಲು ಸಾಲಾಗಿ ನಡೆಸುತ್ತಿರುವ ಸರ್ಕಾರಕ್ಕೆ ಸಮೀಕ್ಷೆಗಳ ಮೂಲಕವೂ ದುಡ್ಡು ಹೊಡೆಯುವ ಹಪಾಹಪಿ! ‘ಪಟ್ಟು-ಮಟ್ಟು-ಒಳಗುಟ್ಟು’ ಕಂಪನಿ ಸೇರಿ ಅಂತಹ ಹಲವಾರು ನಿಗೂಢ ಕಂಪನಿಗಳಿಗೆ ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿಯೇ ಸರ್ಕಾರ ಕೋಟಿ ಕೋಟಿಯಷ್ಟು ಜನರ ತೆರಿಗೆ ಹಣ ಸುರಿಯುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net