

ಸಾಗರ: ಮನುಷ್ಯ ಸಹಜ ದೌರ್ಬಲ್ಯಗಳ ಚಿತ್ರಣವನ್ನು ಕುಲುಮೆ ಕೃತಿ ಕಟ್ಟಿಕೊಡುತ್ತದೆ. ಮನುಷ್ಯತ್ವದ ಮಹತ್ವವನ್ನು ಪರಿಚಯಿಸುವ ಜತೆ ಸತ್ಯವನ್ನು ತೆರೆದಿಡುತ್ತದೆ ಎಂದು ಲೇಖಕ ಕಲೀಂವುಲ್ಲಾ ಹೇಳಿದರು.
ಶಿವಪ್ಪ ನಾಯಕ ನಗರ ಬಡಾವಣೆಯಲ್ಲಿರುವ ಭೂಮಿ ರಂಗಮನೆಯಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಹಾಗೂ ಸ್ಪಂದನ ರಂಗ ತಂಡದಿಂದ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ರಹಮತ್ ತರೀಕೆರೆ ಅವರ ಆತ್ಮಕಥನ ಕುಲುಮೆ ಕುರಿತು ಮಾತನಾಡಿದರು.
ಬದುಕಿನಲ್ಲಿ ಅನುಭವಿಸಿರುವ ನೋವು, ಅಪಮಾನಗಳೇ ರಹಮತ್ ತರೀಕೆರೆ ಅವರ ಬರವಣಿಗೆಗೆ ಹೆಚ್ಚಿನ ಕಸುವು ತಂದು ಕೊಟ್ಟಿವೆ. ಜಾತ್ಯಾತೀತ ಸಹಬಾಳ್ವೆಯ ಬದುಕು ಗ್ರಾಮೀಣ ಬದುಕಿನಲ್ಲಿ ಹೇಗೆ ಅಂತರ್ಗತವಾಗಿದೆ ಎಂಬುದನ್ನು ಕೃತಿಯಲ್ಲಿ ಕಾಣಬಹುದು. ಬಡತನ, ಹಸಿವು ಇಡೀ ಕುಟುಂಬವನ್ನು ಕೂಡಿಸಿಟ್ಟರೆ, ಆಸ್ತಿ ಎಂಬುದು ವಿಘಟನೆಗೆ ಕಾರಣವಾಗುತ್ತದೆ ಎಂಬ ಚಿತ್ರಣವಿದೆ ಎಂದರು.
ಪರಸ್ಪರ ಸಾಹಿತ್ಯ ವೇದಿಕೆಯ ಸಫ್ರಾಜ್ ಚಂದ್ರಗುತ್ತಿ ಮಾತನಾಡಿ, ಬದುಕು ಎಂಬುದು ಜಾತಿ, ಧರ್ಮಕ್ಕಿಂತ ಮಿಗಿಲಾದ ಸಂಗತಿ. ತಾಯ್ತನಕ್ಕಿಂತ ದೊಡ್ಡ ಹಿರಿಮೆ ಮತ್ತೊಂದಿಲ್ಲ ಎಂಬ ಧ್ವನಿಯನ್ನು ಪ್ರಕಟಪಡಿಸುವ ಕುಲುಮೆ ಕೃತಿ. ವ್ಯಕ್ತಿ, ಸಮುದಾಯಗಳ ವಿವರಗಳನ್ನು ನೀಡುತ್ತಲೇ ನಮ್ಮ ನಡುವೆ ಉಂಟಾಗಿರುವ ಸಾಮಾಜಿಕ, ರಾಜಕೀಯ ಪಲ್ಲಟಗಳ ಚಿತ್ರಣವನ್ನು ಕಟ್ಟಿಕೊಡುತ್ತದೆ. ನಮ್ಮ ನಡುವಿನ ಅಪರೂಪದ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ದೇಸಿ ಚಿಂತನೆಗಳ ಮೂಲಕ ಮೀಮಾಂಸೆಗಳನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕ ಹೇಮಕೇಶವ, ಸ್ಪಂದನ ರಂಗ ತಂಡದ ಮುಖ್ಯಸ್ಥೆ ಎಂ.ವಿ.ಪ್ರತಿಭಾ, ನಾಗೇಶ ಬಿದರಗೋಡು , ಎಸ್.ಎಂ.ಗಣಪತಿ ಉಪಸ್ಥಿತರಿದ್ದರು.