

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ನೂತನ ವಿಜಯನಗರ ಜಿಲ್ಲೆಯಲ್ಲಿ ರಾಯಚೂರು ಕೃಷಿ ವಿವಿಯಿಂದ ಕೃಷಿ ವಿಜ್ಞಾನ ಕೇಂದ್ರ ಆರಂಭಕ್ಕೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆಯಲ್ಲಿ ಸ್ಥಳ ಗುರುತಿಸಲಾಗಿದ್ದು ಜಿಲ್ಲಾಡಳಿತ ಸಿದ್ದತೆ ನಡೆಸಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ಅನುಮೋದನೆ ದೊರೆತಿದೆ . ನೂತನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆಯಲ್ಲಿ ಕೃಷಿ ಇಲಾಖೆಯ ಕೃಷಿ ಬೀಜೋತ್ಪಾದನಾ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರಲ್ಲಿ ಆರಂಭಸಲು ಸಿದ್ದತೆ ನಡೆದಿದೆ. ಇದಕ್ಕೆ 50 ಎಕರೆ ಜಮೀನು ಕೃಷಿ ಇಲಾಖೆಯಿಂದ ನೀಡಲು ತೀರ್ಮಾನಿಸಲಾಗಿದ್ದು, ರಾಯಚೂರು ಕೃಷಿ ವಿವಿ ಅಧೀನದಲ್ಲಿ ಈ ಭಾಗದ 8ನೇ ಕೇಂದ್ರ ಆರಂಭಿಸಲಿದ್ದಾರೆ.
ವಿಜಯನಗರ ಜಿಲ್ಲೆಯು ಬಯಲು ಪ್ರದೇಶಗಳನ್ನು ಒಳಗೊಂಡಿದೆ. ತುಂಗಭದ್ರಾ ಜಲಾಶಯ ಇದುವುದರಿಂದ ಕಬ್ಬು, ಬಾಳೆ, ಭತ್ತ ಹೆಚ್ಚು ಬೆಳೆಯಲಾಗುತ್ತದೆ. ಮಳೆ ಆಶ್ರಿತ ಪ್ರದೇಶಗಳಲ್ಲಿ ಮೆಕ್ಕೆಜೋಳ, ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿ ಕಾರ್ಯ ಕ್ರಮಗಳು ನಡೆಯಲಿವೆ. ಜಿಲ್ಲಾ ಕೇಂದ್ರದಿಂದ 53 ಕಿಮೀ ದೂರದಲ್ಲಿದೆ. ಕೂಡ್ಲಿಗಿ ತಾಲೂಕು ಕೇಂದ್ರದಿಂದ 6.6 ಕಿಮೀ ದೂರವಿದೆ. ಕೊಟ್ಟೂರು 27 ಕಿಮೀ, ಹಗರಿಬೊಮ್ಮನಹಳ್ಳಿ 38 ಕಿಮೀ, ಹರಪನಹಳ್ಳಿ 54 ಕಿಮೀ, ಹೂವಿನ ಹಡಗಲಿ 69 ಕಿಮೀ ದೂರದಲ್ಲಿದೆ.
ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳು ಮೌಲ್ಯಮಾಪನ, ವಿವಿಧ ಕೃಷಿ ವ್ಯವಸ್ಥೆಗಳ ಅಡಿಯಲ್ಲಿ ಅದರ ಸ್ಥಳ ನಿರ್ದಿಷ್ಟತೆಯನ್ನು ಗುರುತಿಸಲು ತಂತ್ರಜ್ಞಾನ ಅಥವ ಉತ್ಪನ್ನಗಳ ಪರಿಷ್ಕರಣೆ ಮಾಡಲಿದೆ. ರೈತರ ಹೊಲಗಳಲ್ಲಿ ಸುಧಾರಿತ ಕೃಷಿ ತಂತ್ರಜ್ಞಾನಗಳ ಉತ್ಪಾದನಾ ಸಾಮಥ್ರ್ಯವನ್ನು ಸ್ಥಾಪಿಸಲು ಮುಂಚೂಣಿಯ ಪ್ರಾತ್ಯಕ್ಷಿಕೆಗಳು ಮತ್ತು ರೈತರು, ಗ್ರಾಮೀಣ ಯುವಕರು ಮತ್ತು ವಿಸ್ತರಣಾ ಸಿಬ್ಬಂದಿಗಳ ತರಬೇತಿಯ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಆಗಲಿದೆ. ಕೃಷಿ ವಿಜ್ಞಾನ ಕೇಂದ್ರಗಳು ಸಾರ್ವಜನಿಕ, ಖಾಸಗಿ ಮತ್ತು ಸ್ವಯಂ ಸೇವಾ ವಲಯಗಳ ಉಪಕ್ರಮಗಳನ್ನು ಬೆಂಬಲಿಸಲಿದೆ. ಕೃಷಿ ತಂತ್ರಜ್ಞಾನದ ಸಂಪನ್ಮೂಲ ಮತ್ತು ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ದೇಶದಲ್ಲಿ 732 ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯದಲ್ಲಿ 34 ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಯಚೂರು ಕೃಷಿ ವಿವಿಯ ವ್ಯಾಪ್ತಿಯಲ್ಲಿ ಈಗಾಗಲೇ 7 ಕೃಷಿ ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವಿಜಯನಗರಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಸೇರಿದರೆ 8 ಕೇಂದ್ರಗಳು ಕಾರ್ಯ ನಿರ್ವಹಿಸಲಿದೆ. ಇಲ್ಲಿ ಆರಂಭ ಆಗುವ ಕೃಷಿ ವಿಜ್ಞಾನ ಕೇಂದ್ರ ಈ ಭಾಗದ ರೈತ ಸಮುದಾಯದ ಉನ್ನತಿಗಾಗಿ ಕೃಷಿ ತಂತ್ರಜ್ಞಾನದ ಪ್ರಮುಖ ಸಂಪನ್ಮೂಲ ಮತ್ತು ಜ್ಞಾನ ಕೇಂದ್ರ ಆಗಲಿದೆ.
ವಿವಿಧ ಕೃಷಿ ವ್ಯವಸ್ಥೆಗಳ ಅಡಿಯಲ್ಲಿ ಕೃಷಿ ತಂತ್ರಜ್ಞಾನಗಳ ಸ್ಥಳ ನಿರ್ದಿಷ್ಟತೆಯನ್ನು ಗುರುತಿಸಲು ಆನ್-ಫಾರ್ಮ್ ಪರೀಕ್ಷೆಯನ್ನು ನಡೆಸುವುದು. ರೈತರ ಹೊಲಗಳಲ್ಲಿ ವಿವಿಧ ಬೆಳೆಗಳು ಮತ್ತು ಉದ್ಯಮಗಳ ಉತ್ಪಾದನಾ ಸಾಮಥ್ರ್ಯವನ್ನು ಸ್ಥಾಪಿಸಲು ಮುಂಚೂಣಿಯ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುವುದು. ತಂತ್ರಜ್ಞಾನದ ಮೌಲ್ಯಮಾಪನ, ಪರಿಷ್ಕರಣೆ ಮತ್ತು ಪ್ರಾತ್ಯಕ್ಷಿಕೆಗೆ ಸಂಬಂಧಿಸಿದ ಆಧುನಿಕ ಕೃಷಿ ತಂತ್ರಜ್ಞಾನಗಳಲ್ಲಿ ರೈತರಿಗೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನವೀಕರಿಸಲು ಅಗತ್ಯತೆ ಆಧಾರಿತ ತರಬೇತಿಗಳನ್ನು ಆಯೋಜಿಸುವುದು. ಸೂಕ್ತ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜನಸಾಮಾನ್ಯರಿಗೆ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುವುದು. ಉತ್ತಮ ಗುಣಮಟ್ಟದ ಬೀಜಗಳು ಮತ್ತು ನೆಟ್ಟ ಸಾಮಗ್ರಿಗಳು, ಜಾನುವಾರುಗಳು, ಕೋಳಿ ಮತ್ತು ಮೀನುಗಾರಿಕೆ ತಳಿಗಳು ಮತ್ತು ಉತ್ಪನ್ನಗಳು ಮತ್ತು ರೈತ ಸಮುದಾಯಕ್ಕೆ ವಿವಿಧ ದ್ವಿಉತ್ಪನ್ನಗಳ ಉತ್ಪಾದನೆ ಮತ್ತು ಪೂರೈಕೆ. ಜಿಲ್ಲೆಯ ಕೃಷಿ ಆರ್ಥಿಕತೆಯನ್ನು ಸುಧಾರಿಸಲು ಸಾರ್ವಜನಿಕ, ಖಾಸಗಿ ಮತ್ತು ಸ್ವಯಂ ಸೇವಾ ವಲಯದ ಉಪಕ್ರಮಗಳನ್ನು ಬೆಂಬಲಿಸಲು ಕೃಷಿ ತಂತ್ರಜ್ಞಾನದ ಸಂಪನ್ಮೂಲ ಮತ್ತು ಜ್ಞಾನ ಕೇಂದ್ರವಾಗಿ ಕೆಲಸ ಮಾಡಲಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ಜಿಲ್ಲೆಗೊಂದು ಕೃಷಿ ವಿಜ್ಞಾನ ಕೇಂದ್ರ ಆರಂಭಕ್ಕೆ ಸಿದ್ದತೆ ನಡೆದಿದೆ. ಜಿಲ್ಲಾಡಳಿತದಿಂದ ಜಮೀನು ನೀಡಲಿದ್ದೆವೆ. ಕೇಂದ್ರ ಆರಂಭದ ನಂತರ ಈ ಭಾಗದ ರೈತರಿಗೆ ಹಾಗೂ ಕೃಷಿ ವಲಯಕ್ಕೆ ಅನುಕೂಲ ಆಗಲಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ