KSRTC ಬಸ್- ಬೈಕ್​ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು, ನಡುರಸ್ತೆಯಲ್ಲೇ ಹೊತ್ತಿ ಉರಿದ ಬೈಕ್​-ಬಸ್​

accident
Published on

ಆನೇಕಲ್​: ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್​ ಸವಾರರಿಬ್ಬರು ಮೃತಪಟ್ಟಿದ್ದಾರೆ. ಬೈಕ್​ನಲ್ಲಿ ಪೆಟ್ರೋಲ್​ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಬಸ್​ಗೂ ವ್ಯಾಪಿಸಿದ್ದು, ಅದೃಷ್ಟವಶಾತ್​ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಇಂತಹ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಿಕ್ಕಿರಿ ಮೇಡು ಬಳಿಯ ಹೊಸ ವೈದ್ಯಕೀಯ ಕಾಲೇಜು ಸಮೀಪ ಭಾನುವಾರ ಸಂಭವಿಸಿದೆ. ಹೊಸೂರು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್​ಟಿಸಿ ಬಸ್ ಅಪಘಾತಕ್ಕೀಡಾಗಿದೆ. ಡಿಕ್ಕಿಯ ರಭಸಕ್ಕೆ ಪಲ್ಸರ್ ಬೈಕ್​ನ ಟ್ಯಾಂಕರ್​ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬಸ್​ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬಸ್ಸಿಗೂ ಬೆಂಕಿ ವ್ಯಾಪಿಸುತ್ತಿದ್ದಂತೆ ಪ್ರಯಾಣಿಕರನ್ನು ಕೂಡಲೇ ಚಾಲಕ ಹಾಗೂ ನಿರ್ವಾಹಕರು ಕೆಳಗೆ ಇಳಿಸಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು, ಕುರುಬರಬಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಕ್​ ಸವಾರರಿಬ್ಬರ ಮೃತದೇಹ ರಸ್ತೆಯಲ್ಲಿ ನಜ್ಜುಗುಜ್ಜಾಗಿ ಬಿದ್ದಿತ್ತು. ಅಪಘಾತದ ಭೀಕರತೆ ಕಂಡು ಜನರು ಬೆಚ್ಚಿಬಿದ್ದರು. ಮೃತರಿಬ್ಬರೂ ಕುರುಬರಪಲ್ಲಿ ಮೂಲದವರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net