

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧ್ಯಕ್ಷ ಸ್ಥಾನದ ನೇಮಕಾತಿ ವಿಚಾರ ಮತ್ತೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಮಾಜಿ ಅಧ್ಯಕ್ಷ ಸುಧೀಂದ್ರ ರಾವ್ ರಾಜೀನಾಮೆ ವಿಚಾರ ಶೇಷಾದ್ರಿಪುರ ಪೊಲೀಸ್ ಠಾಣೆ ಮೆಟ್ಟೀಲೇರಿದೆ.
ಇಂಜಿನಿಯರ್ ಆಗಿರುವ ನನ್ನನ್ನು 2019 ನ.30ರಂದು ಕೆಎಸ್ಪಿಸಿಬಿ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ಮಂಡಳಿಯ ಆಡಳಿತ ವ್ಯವಹಾರಕ್ಕೆ ಸಂಬಂಧಿಸಿದ ರಿಟ್ ಪಿಟಿಷನ್ ಮತ್ತು ಇತರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಲೇವಾರಿಗಾಗಿ ವಕೀಲ ಗುರುರಾಜ್ ಜೋಷಿ ಅವರನ್ನು ಮಂಡಳಿಗೆ ಕಾನೂನು ಸಲಹೆಗಾರರಾಗಿ ನೇಮಕ ಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ ಚದುರಿದವರನ್ನು ಒಗ್ಗೂಡಿಸಲು ‘ಕೈ’ ಸಾಹಸ
ಫೆಬ್ರವರಿ ಕೊನೆಯ ವಾರದಲ್ಲಿ ಗುರುರಾಜ್ ಜೋಷಿ ಕಚೇರಿಗೆ ಕರೆಸಿಕೊಂಡು 10 ಖಾಲಿ ಹಸಿರು ಕಾಗದಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿರುವ ಪತ್ರವನ್ನು ಮೇ 2ರ ಸಂಜೆ ವಾಟ್ಸ್ಆಪ್ ಮಾಡಿದರು. ಗಾಬರಿಗೊಂಡು ಸಹಿ ಮಾಡಿರುವ ಖಾಲಿ ಕಾಗದಗಳನ್ನು ವಾಪಸ್ ಕೇಳಿದಾಗ 10ರಲ್ಲಿ 7 ಕಾಗದಗಳನ್ನು ಕೊಟ್ಟಿದ್ದಾರೆ. ಇನ್ನೊಂದು ಕಾಗದವನ್ನು ಪಿಐಎಲ್ ಅರ್ಜಿ ವಿಲೇವಾರಿಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಉಳಿದ ಕಾಗದಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ದೂರಿನಲ್ಲಿ ಸುಧೀಂದ್ರ ರಾವ್ ಆರೋಪಿಸಿದ್ದಾರೆ.
ಹೈಕೋರ್ಟ್ನಲ್ಲಿ ಅರ್ಜಿ: ಕೆಎಸ್ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಸಚಿವರಾಗಿರುವ ಡಾ. ಸುಧಾಕರ್ ನೇಮಕದ ವೇಳೆ ಸುಪ್ರೀಂಕೊರ್ಟ್ ಮಾರ್ಗಸೂಚಿ ಪಾಲನೆ ಆಗಿಲ್ಲ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಅಷ್ಟರಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದಾದ ಮೇಲೆ ಸುಧೀಂದ್ರ ರಾವ್ ಅವರನ್ನು ಸರ್ಕಾರ ನೇಮಕ ಮಾಡಿತ್ತು.
ಮತ್ತೆ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಏಕರೂಪ ಮಾರ್ಗಸೂಚಿ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು. ಸುಧೀಂದ್ರ ರಾವ್ ನೇಮಕಾತಿ ಆದೇಶ ಹಿಂಪಡೆಯುವುದಾಗಿ ಮಾ. 6ರಂದು ಕೋರ್ಟ್ ಗಮನಕ್ಕೆ ರಾಜ್ಯ ಸರ್ಕಾರ ತಂದಿತ್ತು.