ತುರ್ತು ಪಾಸ್, ನಿರ್ವಹಣೆ ನಪಾಸು!: ಕೆಎಸ್​ಪಿ ಕ್ಲಿಯರ್ ಪಾಸ್ ದುರ್ಬಳಕೆ ಆರೋಪ

pass
Published on

ಅವಿನಾಶ್ ಮೂಡಂಬಿಕಾನ ಬೆಂಗಳೂರು

ಲಾಕ್​ಡೌನ್​ನಿಂದ ಲಕ್ಷಾಂತರ ಮಂದಿ ಊರುಗಳಿಗೆ ತೆರಳಲಾಗದೆ ರಾಜ್ಯದ ವಿವಿಧೆಡೆ ಸಿಲುಕಿಕೊಂಡಿದ್ದನ್ನು ಗಮನದಲ್ಲಿಟ್ಟುಕೊಂಡು ಅನ್ಯ ಜಿಲ್ಲೆಗಳಿಗೆ ತೆರಳಲು ಸರ್ಕಾರ ರೂಪಿಸಿದ್ದ ಆನ್​ಲೈನ್ ಕೆಎಸ್​ಪಿ ಕ್ಲೀಯರ್​ಪಾಸ್ ಸಂಪೂರ್ಣವಾಗಿ ದುರ್ಬಳಕೆಯಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ನಿಯಂತ್ರಣದಲ್ಲಿರುವ ಕರೊನಾವೈರಸ್ ಎಲ್ಲೆಡೆ ಹರಡಿ ಸೋಂಕಿತರ ಪ್ರಮಾಣ ಭಾರಿ ಏರಿಕೆಯಾಗುವ ಲಕ್ಷಣಗಳಿವೆ.

ಸದ್ಯ ಮೊಬೈಲ್ ನಂಬರ್ ಆಧಾರದ ಮೇಲೆ ಪಾಸ್ ನೀಡಲಾಗುತ್ತಿದೆ. ಬೇರೆ ಬೇರೆ ಮೊಬೈಲ್ ನಂಬರ್​ನಿಂದ ನೋಂದಣಿ ಮಾಡಿ ಪಾಸ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವಾಹನದಲ್ಲಿ ಬೇಕಾ ಬಿಟ್ಟಿ ಓಡಾಡುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ. ಪ್ರಜ್ಞಾವಂತ ನಾಗರಿಕರಿಂದ ಪಾಸ್ ನಿರ್ವಹಣಾ ವೈಫಲ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಸುಳ್ಳು ಕಾರಣ ನೀಡಿ ಪ್ರಯಾಣ: ಇದುವರೆಗೆ 2 ಲಕ್ಷಕ್ಕೂ ಅಧಿಕ ಮಂದಿ ಪಾಸ್ ಪಡೆದು ಬೇರೆ ಜಿಲ್ಲೆಗಳಿಗೆ ಪ್ರಯಾಣಿಸಿದ್ದು, ಇದರಲ್ಲಿ ಸುಳ್ಳು ಕಾರಣಗಳನ್ನು ನೀಡಿ ಪ್ರಯಾಣಿಸಿದವರೇ ಹೆಚ್ಚಾಗಿದ್ದಾರೆ. ಪ್ರತಿ ಪ್ರಯಾಣಿಕರ ಮೇಲೂ ಪೊಲೀಸರು ಕಣ್ಣಿಡಲು ಸಾಧ್ಯವಾಗುತ್ತಿಲ್ಲ. ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಕರೊನಾ ಇನ್ನಷ್ಟು ಉಲ್ಬಣಗೊಳ್ಳಲಿದ್ದು, ಇದುವರೆಗೆ

ರಾಜ್ಯದಲ್ಲಿ ಜಾರಿಯಲ್ಲಿದ್ದ ಕಠಿಣ ಲಾಕ್​ಡೌನ್ ನಿಯಮ ವ್ಯರ್ಥವಾಗಲಿದೆ ಎಂದು ಮಾತು ಕೇಳಿಬಂದಿದೆ.

ತುರ್ತು ತೆರಳುವವರು ಟ್ಯಾಕ್ಸಿ ಅಥವಾ ಕೆಲ ವಾಹನಗಳನ್ನು ಅವಲಂಬಿಸುತ್ತಾರೆ. ಆಯಾ ವಾಹನಗಳ ನಂಬರ್ ಆಧಾರದ ಮೇಲೆ ಹೋಗಲು ಅನುಮತಿ ನೀಡಿದರೆ ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್ ನಂಬರ್ ಆಧಾರವಾಗಿಟ್ಟುಕೊಂಡು ಆನ್​ಲೈನ್ ಪಾಸ್ ಕೊಡಲಾಗುತ್ತದೆ. ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೈಗೇಟ್​ನಿಂದ ಸಾಫ್ಟ್​ವೇರ್ ಅಭಿವೃದ್ಧಿ

ಮೈಗೇಟ್ ಸಾಫ್ಟ್​ವೇರ್ ಕಂಪನಿ ಸಹಾಯದಿಂದ ಕೆಎಸ್​ಪಿ ಕ್ಲೀಯರ್ ಪಾಸ್ ಸಾಫ್ಟ್​ವೇರ್ ಅಭಿವೃದ್ಧಿಪಡಿಸಲಾಗಿದ್ದು, ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಕಮ್ಯುನಿಕೇಷನ್ಸ್, ಲಾಜಿಸ್ಟಿಕ್ಸ್ ಆಂಡ್ ಮಾಡರ್ನೆಸೇಷನ್ ಕಚೇರಿಯಲ್ಲಿ ತಾಂತ್ರಿಕ ಕಾರ್ಯದ ನಿರ್ವಹಣೆ ಮಾಡಲಾಗುತ್ತಿದೆ. ಪೊಲೀಸರ ಸಹಭಾಗಿತ್ವದೊಂದಿಗೆ ಮೈಗೇಟ್ ಕಂಪನಿ ಮುಕ್ತವಾಗಿ ಈ ಸೇವೆ ಸಲ್ಲಿಸುತ್ತಿದೆ.

ಪಾಸ್ ಪಡೆಯುವುದು ಹೇಗೆ?

ಕೆಎಸ್​ಪಿ ಕ್ಲಿಯರ್ ಪಾಸ್ (http://kspclearpass.idp.mygate.com) ವೆಬ್​ಸೈಟ್​ಗೆ ಭೇಟಿ ಕೊಟ್ಟ ಕೂಡಲೇ ನಿಮ್ಮ ಮೊಬೈಲ್ ನಂಬರ್ ಕೇಳಲಾಗುತ್ತದೆ. ಮೊಬೈಲ್ ನಂಬರ್ ಅಳವಡಿಸಿದ ಬಳಿಕ, ಹೆಸರು, ವಿಳಾಸ, ಪಿನ್​ಕೋಡ್, ವಾಹನದ ನಂಬರ್ ನಮೂದಿಸಬೇಕು. ಅದು ಕನ್ಪಮ್ರ್ ಆದ ನಂತರ ಆಯ್ಕೆಯಲ್ಲಿ ವಾಹನದಲ್ಲಿ ಪ್ರಾಯಾಣಿಸುವವರ ಹೆಸರು, ಆಧಾರ್ ಕಾರ್ಡ್ ನಂಬರ್ ಹಾಕಿದರೆ ಆನ್​ಲೈನ್​ನಲ್ಲೇ ಪಾಸ್ ಲಭ್ಯ.

ಒಂದು ಕುಟುಂಬಕ್ಕೆ ಒಂದು ಟ್ರಿಪ್. ಊರಿಗೆ ತೆರಳಲು ಹಾಗೂ ಒಂದು ಟ್ರಿಪ್ ವಾಪಸ್ ಆಗಲು ಅವಕಾಶ ಕಲ್ಪಿಸಲಾಗಿದೆ. ಮತ್ತೆ ಹೋಗಲು ಅನುಮತಿ ಇಲ್ಲ. ತುರ್ತು ಬೇರೆ ಜಿಲ್ಲೆಗಳಿಗೆ ಹೋಗಬೇಕಾದವರಿಗೆ ಅನುಕೂಲವಾಗಲು ಈ ಸೇವೆ ಕಲ್ಪಿಸಲಾಗಿದೆ.

| ಸಿ.ಎಚ್.ಪ್ರತಾಪ್ ರೆಡ್ಡಿ ಎಡಿಜಿಪಿ, ಕಮ್ಯುನಿಕೇಶನ್ಸ್, ಲಾಜಿಸ್ಟಿಕ್ಸ್ ಆಂಡ್ ಮಾಡರ್ನೆಸೇಷನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net