ಕ್ಷಯಮುಕ್ತ ರಾಷ್ಟ್ರಕ್ಕೆ ಸರ್ವರ ಬೆಂಬಲ ಅವಶ್ಯ : ಜಿಪಂ ಸಿಇಒ ಎನ್.ಎಂ.ನಾಗರಾಜ್ ಮನವಿ

24-klr-1
Published on

ಕೋಲಾರ :  ಭಾರತ ದೇಶವನ್ನು 2025ಕ್ಕೆ ಕ್ಷಯರೋಗ ಮುಕ್ತವಾಗಿಸಲು ಪ್ರತಿ ಕುಟುಂಬ ಮತ್ತು ಸಮುದಾಯದ ಬೆಂಬಲ ಅಗತ್ಯ ಎಂದು ಜಿಪಂ ಸಿಇಒ ಎನ್.ಎಂ.ನಾಗರಾಜ್ ಮನವಿ ಮಾಡಿದರು.

ನಗರದ ಹೊರವಲಯದ ಸ್ಯಾನಿಟೋರಿಯಂನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ನಿಯಂತ್ರಿಸಬಹುದು. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಜತೆಗೆ ಕುಟುಂಬ ಮತ್ತು ಸಮುದಾಯದಲ್ಲಿ ರೋಗದ ಬಗ್ಗೆ ಹೇಳಿಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.

ಕೆಲ ಮಾರಕ ರೋಗಗಳ ನಿರ್ಮೂಲನೆಗೆ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಸಿಗಲು ಪ್ರತಿ ನಾಗರಿಕರ ಬೆಂಬಲ ಅಗತ್ಯ. ಕ್ಷಯ ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡಬೇಕು. ರೋಗದ ಕಾರಣಕ್ಕೆ ಮನೆಯಿಂದ ಹೊರಗೆ ಕಳುಹಿಸುವುದು, ಮಾನಸಿಕ, ಭಾವನಾತ್ಮಕವಾಗಿ ಹಿಂಸೆ ಕೊಟ್ಟರೆ ರೋಗಿ ಕುಗ್ಗುತ್ತಾನೆ. ರೋಗಿಗಳಿಗೆ ಚಿಕಿತ್ಸೆಯೊಂದಿಗೆ ಧೈರ್ಯ ತುಂಬಬೇಕು ಎಂದರು.

ಹಿಂದೆ ಕ್ಷಯ ರೋಗಿಗಳನ್ನು ಬಹಿಷ್ಕರಿಸುವ ಮೂಢನಂಬಿಕೆಯಿತ್ತು.ಈಗ ಪತ್ತೆಯಾದ ರೋಗಿಗಳಲ್ಲಿ ಶೇ.83 ಗುಣಮುಖರಾಗಿರುವುದು ವೈದ್ಯರ ಶ್ರಮದಿಂದ. ಕ್ಷಯರೋಗಿಗಳಿಗೆ ಸರ್ಕಾರ ಸೌಲಭ್ಯ ಮತ್ತು ಉಚಿತ ಚಿಕಿತ್ಸೆ ನೀಡುತ್ತಿದೆ. ಇದನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಿ.ಜಗದೀಶ್ ಮಾತನಾಡಿ, ಕ್ಷಯ ರೋಗವು ಸುಮಾರು 4000 ವರ್ಷಗಳ ಹಿಂದಿನಿಂದಲೂ ಕಾಡುತ್ತಿರುವ ಕಾಯಿಲೆ. ವಿಶ್ವದಲ್ಲಿರುವ ಕ್ಷಯ ರೋಗಿಗಳ ಸಂಖ್ಯೆಯಲ್ಲಿ ನಾಲ್ಕನೇ ಒಂದು ಭಾಗ ಭಾರತದಲ್ಲಿ ಕಂಡು ಬಂದಿದೆ. ಭಾರತದಲ್ಲಿ ಸುಮಾರು 5.1 ಲಕ್ಷ ಮಂದಿ ಕ್ಷಯ ರೋಗಿಗಳಿದ್ದಾರೆ. 5 ನಿಮಿಷಕ್ಕೆ ಒಬ್ಬರು ಸಾವನ್ನಾಪ್ಪುತ್ತಿದ್ದಾರೆ. ಕ್ಷಯರೋಗ ಕೂದಲು ಮತ್ತು ಬೆರಳಿನ ಉಗರು ಹೊರತು ಪಡಿಸಿ ಇತರ ಯಾವುದೇ ಅಂಗಗಳಿಗೆ ಸೋಂಕು ಅಂಟಬಹುದು. ಶ್ವಾಸಕೋಶದ ಕ್ಷಯ ಶೇ.50 ಹಾಗೂ ಶ್ವಾಸಕೋಶೇತರ ಕ್ಷಯ ಶೇ.30 ವಾಸಿ ಮಾಡಬಹುದು ಎಂದರು.

ಎಸ್ಸೆನ್ನಾರ್ ಜಿಲ್ಲಾ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಎಸ್.ಜಿ.ನಾರಾಯಣಸ್ವಾಮಿ, ಕುಟುಂಬ ಕಲ್ಯಾಣಾಧಿಕಾರಿ. ಡಾ. ಚಂದನ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ, ತಜ್ಞ ಡಾ. ರವಿಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಡಾ. ಪ್ರೇಮಾ ಹಾಜರಿದ್ದರು.

ತಲಾ 500 ರೂ. ಗೌರವ ಧನ  : ಕ್ಷಯ ರೋಗದ ಮಾಹಿತಿಯನ್ನು ಸರ್ಕಾರಕ್ಕೆ ನೀಡದಿದ್ದರೆ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ವೈದ್ಯರು ಗುರುತಿಸಿದ ಪ್ರಕರಣಗಳಿಗೆ ತಲಾ 500 ರೂ. ಗೌರವ ಧನ ನೀಡಲಾಗುವುದು. ಎಚ್‌ಐವಿ, ಏಡ್ಸ್ ಸೋಂಕಿತರನ್ನು ಕಾಲಕಾಲಕ್ಕೆ ಕ್ಷಯ ರೋಗದ ತಪಾಸಣೆಗೆ ಒಳಪಡಿಸಿ ಸೋಂಕು ನಿಯಂತ್ರಿಸಲು ಡಾಟ್ಸ್ ಮತ್ತು ಎಆರ್‌ಟಿ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಜಿ.ಜಗದೀಶ್ ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net