ವರನಿಲ್ಲದ ಮದುವೆ ಸಂಪ್ರದಾಯದಂತೆ ನೆರವೇರಿತು: ಕೊನೆಗೂ ತನಗೆ ತಾನೇ ಮದುವೆಯಾದ ಕ್ಷಮಾ ಬಿಂದು!

khsama bindu
Published on

ಅಹಮದಾಬಾದ್: ಇತ್ತೀಚೆಗೆ ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಭಾರೀ ಸುದ್ದಿಯಾಗಿದ್ದ ಗುಜರಾತಿನ ವಡೋದರಾ ಮೂಲದ ಕ್ಷಮಾ ಬಿಂದು, ಗುರುವಾರ ಆಕೆ ಹೇಳಿದಂತೆ ಮದುವೆಯಾಗಿದ್ದಾಳೆ.

ಶಾಸ್ತ್ರ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುವ ಕ್ಷಮಾ, ಮದುವೆಯಲ್ಲಿ ಸ್ನೇಹಿತರು, ಅತಿಥಿಗಳು ಪಾಲ್ಗೊಂಡಿದ್ದರು. ಆಕೆ ಈ ಮುಂಚೆ ಹೇಳಿದಂತೆ ಈ ಮದುವೆಯಲ್ಲಿ ವರ ಮಾತ್ರ ಇರಲಿಲ್ಲ.

ಜೂನ್​ 11 ಕ್ಕೆ ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದ ಕ್ಷಮಾ, ಹಲವು ವಿವಾದಗಳ ಕಾರಣದಿಂದ ಜೂನ್​ 9 ರಂದೆ ಮದುವೆಯಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಹನಿಮೂನ್​​ಗೂ ಸಹ ಹೋಗಲಿದ್ದೇನೆ. ನನ್ನ ನಂಬಿಕೆ ಹಾಗೂ ಭರವಸೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಕ್ಷಮಾ ಹೇಳಿದ್ದಾರೆ.

ಕಳೆದ ವಾರ ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಕ್ಷಮಾ, ನಾನು ಉಭಯಲಿಂಗಿ (ಬೈಸೆಕ್ಸುವಲ್​). ನಾನು ಪುರುಷ ಮತ್ತು ಮಹಿಳಾ ಜತೆಗಾರರನ್ನು ಹೊಂದಿದ್ದೇನೆ. ಇಂದಿಗೂ ಅವರ ಜತೆ ಸಂಪರ್ಕದಲ್ಲಿದ್ದೇನೆ. ಆದರೆ, ನಮ್ಮ ನಡುವೆ ಏನೂ ನಡೆದಿಲ್ಲ. ನಾನು ಅನೇಕ ವರ್ಷಗಳಿಂದ ಏಕಾಂಗಿಯಾಗಿದ್ದೇನೆ. ನನ್ನ ಏಕಾಂತದ ಮೇಲೆ ನನಗೆ ಪ್ರೀತಿಯಾಗಿದೆ. ನನ್ನನ್ನು ನಾನೇ ಪ್ರೀತಿ ಮಾಡುತ್ತೇನೆ. ಇದುವರೆಗೆ ಯಾರೊಂದಿಗೂ ಸಹ ಇಂತಹ ಅನುಭವ ಆರಲಿಲ್ಲ. ನಾನು ಚಿಕ್ಕಂದಿನಿಂದಲೂ ವಧುವಾಗಲು ಇಷ್ಟಪಡುತ್ತಿದ್ದೆ. ಆದರೆ, ಇನ್ನೊಬ್ಬರ ಪತ್ನಿ ಆಗಿ ಇರಲು ಆಗುವುದಿಲ್ಲ ಎಂದು ಕ್ರಮೇಣ ಅರಿತುಕೊಂಡೆ. ಮೂರ್ನಾಲ್ಕು ತಿಂಗಳುಗಳ ಕಾಲ ಯೋಚಿಸಿದ ನಂತರ, ಒಂದು ನಿರ್ಧಾರಕ್ಕೆ ಬಂದೆ. ಕೊನೆಗೆ ನನ್ನನ್ನು ನಾನೇ ಮದುವೆ ಆಗಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net