ಬೆಂಗಳೂರು:
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ (ಕೆಎಸ್‌ಡಿಎಲ್) ಕಾರ್ಖಾನೆಯು 2023-24ನೇ ಸಾಲಿನಲ್ಲಿ ಮಾಡಿರುವ 362.07 ಕೋಟಿ ರೂ ಲಾಭದ ಪೈಕಿ 108.62 ಕೋಟಿ ರೂ ಲಾಂಭಾಂಶದ ಚೆಕ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಕಾರ್ಖಾನೆ ಅಧ್ಯಕ್ಷ ಸಿ.ಎಸ್.ನಾಡಗೌಡರು ಹಸ್ತಾಂತರಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಚೆಕ್ ಜೊತೆಗೆ ಸಿಎಂ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ 5 ಕೋಟಿ ರೂ ಚೆಕ್ ನೀಡಲಾಯಿತು. ಕಾರ್ಖಾನೆ ಇತಿಹಾಸದಲ್ಲಿ ಇಷ್ಟು ಮೊತ್ತದ ಲಾಭಾಂಶದ ಚೆಕ್ ನೀಡಿರುವುದು ಇದೇ ಮೊದಲು.
ಸಿಎಂ ಸಿದ್ದರಾಮಯ್ಯ, ಐದು ವರ್ಷಗಳ ಹಿಂದೆ 15.91 ಕೋಟಿ ರೂ ಲಾಭಾಂಶ ಕೊಟ್ಟಿದ್ದ ಈ ಉದ್ದಿಮೆಯು ಈ ವರ್ಷ 108 ಕೋಟಿ ರೂ.ಗಳಿಗೂ ಹೆಚ್ಚಿನ ಡಿವಿಡೆಂಟ್ ಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಎಂ ಬಿ ಪಾಟೀಲ ಮಾತನಾಡಿ, ಈ ಲಾಭವನ್ನು ಇನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಹೊಸಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಸಾರ್ವಜನಿಕ ಉದ್ದಿಮೆಗಳ ಲಾಭಾಂಶದಲ್ಲಿ ಶೇ.30ರಷ್ಟನ್ನು ಸರಕಾರಕ್ಕೆ ಕೊಡಬೇಕಾದ್ದು ನಿಯಮವಾಗಿದೆ. ಇದಕ್ಕೆ ತಕ್ಕಂತೆ ಈ ಲಾಭಾಂಶವನ್ನು ಸರಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧ್ಯಕ್ಷ ನಾಡಗೌಡ ವಿವರಿಸಿದರು.
ಈ ಸಂದರ್ಭದಲ್ಲಿ ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ.ಎಂ.ಪ್ರಶಾಂತ್, ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಾದ ಕೆ.ಎಲ್.ರವೀಶ ಗಂಗಪ್ಪ ಅವರು ಉಪಸ್ಥಿತರಿದ್ದರು.