

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಪದಾಧಿಕಾರಿಗಳ ಅವಧಿ ವಿಸ್ತರಣೆ ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ 18ಕ್ಕೆ ಮುಂದೂಡಿದೆ.
ಈ ಸಂಬಂಧ ವಕೀಲ ರಹಮತುಲ್ಲಾ ಕೊತ್ವಾಲ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು. ಈ ವೇಳೆ ಖುದ್ದು ವಾದ ಮಂಡಿಸಿದ ವಕೀಲ ರಹಮತುಲ್ಲಾ ಕೊತ್ವಾಲ್ ಅವರು ಕೆಎಸ್‌ಬಿಸಿ ಅಧಿಕಾರಾವಧಿಯನ್ನು 2023ರ ಜೂನ್‌ನಿಂದ ಅನ್ವಯಿಸುವಂತೆ ಬಿಸಿಐ ವಿಸ್ತರಿಸಿರುವ ಮುಖೇನ ಅಕ್ರಮ ಎಸಗಿದೆ ಎಂದು ಪೀಠದ ಗಮನಕ್ಕೆ ತಂದರು.
ಇದಕ್ಕೆ ನ್ಯಾಯಪೀಠ ಪ್ರತಿಕ್ರಯಿಸಿ ಈ ವಿಚಾರವಾಗಿ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವಾಗ ಈ ಅರ್ಜಿಯನ್ನು ಪರಿಗಣಿಸುವುದು ಹೇಗೆ? ನಿಮ್ಮ ಕೋರಿಕೆಗಳನ್ನು ಪೀಠದ ಮುಂದೆ ಇರಿಸಿ ಅದನ್ನು ಪರಿಶೀಲಿಸಲಾಗುವುದು ಎಂದಿತು.
ಇದಕ್ಕೆ ಪ್ರತಿಯಾಗಿ ಕೊತ್ವಾಲ್ ಅವರು ಕೆಎಸ್‌ಬಿಸಿಗೆ ಸಂಬಂಧಿಸಿದ ವಿಚಾರವನ್ನು ಸ್ವತಂತ್ರವಾಗಿ ನ್ಯಾಯಪೀಠ ಪರಿಗಣಿಸಬಹುದು. ಈ ಪ್ರಕರಣವನ್ನು ಆಗಾಗ ಮುಂದೆ ಒಯ್ಯುತ್ತಿರುವುದಕ್ಕೆ ಬಿಸಿಐ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವಿವರಣೆ ನೀಡಲು ಮುಂದಾದರು.
ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಬಿಟ್ಟು ಇದನ್ನು ಸ್ವತಂತ್ರವಾಗಿ ಪರಿಗಣಿಸಲು ಸಾಧ್ಯವೇ? ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನಮ್ಮ ಮುಂದೆ ಇರಿಸಿ ಎಂದು ಪೀಠ ನುಡಿಯಿತು.
ಈ ನಡುವೆ ಬಿಸಿಐ ಪ್ರತಿನಿಧಿಸಿದ್ದ ವಕೀಲೆ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹೈಕೋರ್ಟ್‌ನಿಂದ ಅರ್ಜಿ ಹಿಂಪಡೆಯುವ ಸಂಬಂಧ ವರ್ಗಾವಣೆ ಅರ್ಜಿಯನ್ನೂ ದಾಖಲಿಸಲಾಗಿದೆ ಎಂದರು.
ಆಗ ಪೀಠವು ಅರ್ಜಿದಾರರು ಅದಕ್ಕೂ ಇದಕ್ಕೂ ಭಿನ್ನತೆ ಇದೆ ಎನ್ನುತ್ತಿದ್ದಾರೆ ಎಂದರು. ಅಲ್ಲದೇ, ಅರ್ಜಿದಾರರನ್ನು ಕುರಿತು, ಈ ಅರ್ಜಿಯನ್ನು ವರ್ಗಾವಣೆಯ ಮೂಲಕ ಹಿಂಪಡೆಯಲು ಕೋರಲಾಗಿದೆ ಎಂದು ಬಿಸಿಐ ಹೇಳುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿದಾಗ ನಾವೇನೂ ಮಾಡಲಾಗದು. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಕೋರುವ ಮುನ್ನ ವರ್ಗಾವಣೆ ಅರ್ಜಿಗೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆಯಬೇಕು ಎಂದಿತು.
ಅಂತಿಮವಾಗಿ ಬಿಸಿಐ ಕುರಿತು ಪೀಠವು ನೀವು ಕ್ರಮಕೈಗೊಳ್ಳಬೇಕು. ಅನಿರ್ದಿಷ್ಟಾವಧಿಗೆ ಪ್ರಕರಣದ ವಿಚಾರಣೆ ಮುಂದೂಡಲಾಗದು ಎಂದು 18ಕ್ಕೆ ವಿಚಾರಣೆ ನಿಗದಿಪಡಿಸಿತು.