

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಒಂದು ತೂಕವಿತ್ತು. ಆದರೆ ಇಡೀ ವಿಶ್ವವೇ ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಕೆ ಮಾಡುವ ಮೂಲಕ ಅವರೇ ಅದನ್ನು ಮಣ್ಣುಪಾಲು ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ನಾಯಕರಾಗಿರುವ ಖರ್ಗೆ ಇಂತಹ ಹೇಳಿಕೆ ನೀಡಿರುವುದು ದುರಂತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಖರ್ಗೆ ಅವರು ಪ್ರಧಾನಿ ಮೋದಿ ಬಗ್ಗೆ ಆ ರೀತಿ ಹೇಳಿಕೆ ನೀಡಿದ್ದಾರಾ ಎಂಬ ಅನುಮಾನ ಇನ್ನೂ ಕಾಡುತ್ತಿದೆ. ಇದುವರೆಗೆ ಖರ್ಗೆ ಅವರನ್ನು ನಾವು ಕೂಡ ತಂದೆ ಸ್ವರೂಪದಲ್ಲಿ ನೋಡುತ್ತಿದ್ದೇವು, ಗೌರವಿಸುತ್ತಿದ್ದೆವು. ಕಾಂಗ್ರೆಸ್‌ನ ಹಿರೋ ಎಂದೇ ಭಾವಿಸಿದ್ದೇವು. ಆದರೆ ಇಷ್ಟು ಕೀಳುಮಟ್ಟಕ್ಕೆ ಇಳುತ್ತಾರೆಂದು ಭಾವಿಸಿರಲಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಖರ್ಗೆ ಅವರಿಗೆ ಈ ದುಸ್ಥಿತಿ ಏಕೆ ಬಂದಿತೋ ನನಗೂ ಅರ್ಥವಾಗುತ್ತಿಲ್ಲ. ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ನಾಯಕರಾಗಬೇಕು. ಖಳನಾಯಕನಾಗಬಾರದು. ಇಡೀ ದೇಶ, ವಿಶ್ವವೇ ಮೋದಿ ಅವರನ್ನು ಗೌರವದಿಂದ ಕಾಣುತ್ತಿರುವಾಗ ವಿಷಸರ್ಪಕ್ಕೆ ಹೋಲಿಸಿದ್ದು ಖರ್ಗೆ ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿದೆ. ಮೋದಿ ಟೀಕಿಸುವವರು ಯಾವತ್ತಿಗೂ ಉದ್ಧಾರ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಈಶ್ವರಪ್ಪ ಮುಸ್ಲಿಂ ವಿರೋಧಿ ಅಲ್ಲ: ರಾಷ್ಟ್ರೀಯವಾದಿ ಮುಸ್ಲಿಮರು ನಮ್ಮ ಜತೆಗಿದ್ದಾರೆ. ಬಿಜೆಪಿಗೆ ಮತ ನೀಡುತ್ತಾರೆ. ನಾನು ಎಂದಿಗೂ ಮುಸ್ಲಿಂ ವಿರೋಧಿಯಲ್ಲ. ಆದರೆ ದೇಹದ್ರೋಹಿ, ಪಾಕಿಸ್ತಾನದ ಪರವಾಗಿರುವ ಮುಸ್ಲಿಮರ ವಿರೋಧಿ ನಾನು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಪಾಕ್ ಪರ ಘೋಷಣೆ ಕೂಗುವವರು, ನಿಷೇಧಿತ ಪಿಎಫ್‌ಐ ಸಂಘಟನೆಯವರು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಮುಸ್ಲಿಮರ ಮತಗಳು ನಮಗೆ ಬೇಡ ಎಂದಿದ್ದೇನೆ. ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸುಮ್ಮನೆ ಕೂರುವುದಿಲ್ಲ. ಹಿಂದುತ್ವದ ಬಗ್ಗೆ ನೋವು, ಸಂಕಟ ಬಂದರೆ ಒಂದು ಕ್ಷಣವೂ ಸುಮ್ಮನೇ ಕೂರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಗದೀಶ್ ಶೆಟ್ಟರ್‌ಗೆ ಹುಚ್ಚು, ಭ್ರಮೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಹುಚ್ಚು ಹೆಚ್ಚಾಗಿದೆ. ಅವರು ತಮ್ಮನ್ನು ತಾವು ರಾಷ್ಟ್ರೀಯ ನಾಯಕರೆಂಬ ಭ್ರಮೆಯಲ್ಲಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಶೆಟ್ಟರ್‌ಗೆ ಈ ಜನ್ಮದಲ್ಲಿ ಬುದ್ದಿ ಬರುವುದಿಲ್ಲ. ಬಿಜೆಪಿಯಲ್ಲಿ ಎಲ್ಲಿಂದ ಎಲ್ಲಿಗೆ ಹೋಗಿದ್ದರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಬಿಜೆಪಿ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಟಾರ್ಗೆಟ್ ಮಾಡುತ್ತಿದೆ ಎನ್ನುವುದು ಅವರ ಹುಚ್ಚು ಕಲ್ಪನೆಯಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಎಲ್ಲ ಕಡೆ ಪ್ರಚಾರಕ್ಕೆ ಹೋಗುತಿದ್ದಾರೆ. ಕೇವಲ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರಕ್ಕೆ ಹೋಗುತ್ತಿಲ್ಲ. ಇದನ್ನು ಶೆಟ್ಟರ್ ಅರ್ಥ ಮಾಡಿಕೊಳ್ಳಬೇಕು. ಪ್ರಚಾರ ಮಾಡುವುದಕ್ಕೆ ನಾವೇನು ಶೆಟ್ಟರ್ ಅನುಮತಿ ಪಡೆಯಬೇಕಿತ್ತಾ ಎಂದು ಪ್ರಶ್ನಿಸಿದರು. ಶೆಟ್ಟರ್ ತಾಯಿಗೆ ದ್ರೋಹ ಬಗೆದಿದ್ದಾರೆ. ಅಂತಹವರನ್ನು ಪ್ರೀತಿಯಿಂದ ಮಾತನಾಡಿಸಬೇಕಾ ಎಂದು ಪ್ರಶ್ನಿಸಿದ ಅವರು, ಅವರ ಕ್ಷೇತ್ರದಲ್ಲೇ 16 ಬಿಜೆಪಿ ಕಾರ್ಪೊರೇಟರ್‌ಗಳಿದ್ದು ಒಬ್ಬರೂ ಕಾಂಗ್ರೆಸ್‌ಗೆ ಹೋಗಿಲ್ಲ. ಶೆಟ್ಟರ್‌ಗೆ ಸೊಕ್ಕು ಬಂದಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜನರೇ ಅದನ್ನು ಇಳಿಸುವರು ಎಂದರು.
ಸಿದ್ದು-ಡಿಕೆಶಿ ಗೂಂಡಾಗಿರಿ ಬಿಡಬೇಕು: ವರುಣಾ ಕ್ಷೇತ್ರದ ಸಿದ್ದರಾಮಯ್ಯನಹುಂಡಿಯಲ್ಲಿ ಬಿಜೆಪಿ-ಕಾಂಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ಗೂಂಡಾಗಿರಿ ಮಾಡಿದ್ದಾರೆ. ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಮತ್ತು ಪೊಲೀಸರಿಗೆ ದೂರು ಕೂಡ ನೀಡಲಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ಮಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.