ಕೃಷಿ ನಿಂತರೆ ಆಹಾರಕ್ಕೆ ಹಾಹಾಕಾರ: ಸಚಿವ ಅಶ್ವತ್ಥನಾರಾಯಣ ಅಭಿಮತ, ರಾಮನಗರದಲ್ಲಿ ರೈತರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ

13-08-rama-minister2
Published on

ರಾಮನಗರ:  ಜಿಲ್ಲೆಯ ರೈತರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಶುಕ್ರವಾರ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಕಲ್ಪ ಫೌಂಡೇಷನ್ ಸಹಯೋಗದಲ್ಲಿ ರೈತ ಉತ್ಪಾದಕ ಕಂಪನಿಗಳ ಸದಸ್ಯರಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಅಶ್ವತ್ಥನಾರಾಯಣ, ಕೃಷಿ ಅಗತ್ಯ ಕ್ಷೇತ್ರವಾಗಿದ್ದು, ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳು ನಿಲ್ಲಬಾರದು.

ಒಂದು ವೇಳೆ ಬೇಸಾಯ ನಿಂತರೆ, ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ ಎಂದರು. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು ಎನ್ನುವುದೇ ಸರ್ಕಾರದ ಉದ್ದೇಶ. ಅದಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಅನೇಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ನಗರಗಳಲ್ಲಿ ಸೃಷ್ಟಿಯಾಗುವ ಬಿಕ್ಕಟ್ಟುಗಳನ್ನು ತಂತ್ರಜ್ಞಾನದ ಸಹಕಾರದಿಂದ ಬಗೆಹರಿಸಿಕೊಳ್ಳುವಂತೆ, ಅದೇ ರೀತಿ ಗ್ರಾಮೀಣ ಭಾಗದಲ್ಲಿಯೂ ಪರಿಹಾರಗಳನ್ನು ನೀಡಬೇಕು. ಆ ದಿಕ್ಕಿನಲ್ಲಿ ಕೃಷಿ ಕಲ್ಪ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಉತ್ಪಾದಕ ಸಂಸ್ಥೆಗಳು ಹೆಚ್ಚೆಚ್ಚು ಸಹಕಾರಿ ಎಂದಿದ್ದರು. ಅದು ನಮ್ಮ ಭಾಗದಲ್ಲಿಯೂ ಸಾಕಾರವಾಗಿದೆ. ರೈತರ ಆದಾಯ ದ್ವಿಗುಣವಾಗುತ್ತಿದೆ. ಇಂಥ ಸಂಘಗಳ ಜತೆ ಸೇರಿ ರೈತರು ಕೆಲಸ ಮಾಡಿದರೆ ಅತ್ಯುತ್ತಮ ಲಾಭ ಗಳಿಸಬಹುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಅಗ್ರಿ ಲಿಂಕ್ ಗಟ್ಟಿಯಾಗಿರಬೇಕು : ಕೃಷಿಯಲ್ಲಿ ಉತ್ಪಾದನೆ, ಖರೀದಿ ಮತ್ತು ಮಾರಾಟ ಎನ್ನುವ ಮೂರು ಅಂಶಗಳು ಬಹು ಮುಖ್ಯ. ಈ ಲಿಂಕ್ ಗಟ್ಟಿಯಾಗಿರಬೇಕು. ಉತ್ತಮವಾದ ಫಸಲು ಸಿಕ್ಕಿದ ಮೇಲೆ ರೈತನಿಗೆ ನ್ಯಾಯಯುತ ಬೆಲೆ ಸಿಗಬೇಕು. ಬಳಿಕ ಖರೀದಿದಾರನೂ ಆ ಬೆಳೆಯನ್ನು ಉತ್ತಮ ದರಕ್ಕೆ ಮಾರಬೇಕು. ಈ ಸರಪಳಿ ಎಲ್ಲಿಯೂ ದುರ್ಬಲ ಆಗದಂತೆ ನೋಡಿಕೊಳ್ಳಬೇಕು ಎಂದು ಡಾ.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಯಾವ ಬೆಳೆ ಮತ್ತು ಎಲ್ಲಿ ಮಾರಾಟ? : ರೈತರಿಗೆ ಏನು ಬೆಳೆಯಬೇಕು? ಯಾರಿಗೆ ಮಾರಬೇಕು? ಎಂಬ ಅರಿವು ಇರಬೇಕು. ಅವರಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೊದಲ ಫೈಲಟ್ ಪ್ರಾಜೆಕ್ಟ್ ಆರಂಭ ಮಾಡಲಾಗಿದೆ. ಬಳಿಕ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರೈತರ ಉತ್ಪಾದಕ ಸಂಘಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಇಲ್ಲಿ ಬೆಳೆಯುವ ತೆಂಗು ಈಗ ಆಂಧ್ರಪ್ರದೇಶದ ವಿಶಾಖ ಪಟ್ಟಣದಲ್ಲಿ ಮಾರಾಟವಾಗುತ್ತಿದೆ.

ವಾರಕ್ಕೆ ಒಂದು ಲೋಡ್ ತೆಂಗು ಅಲ್ಲಿಗೆ ಹೋಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.ಕೃಷಿ ಕಲ್ಪ ಫೌಂಡೇಷನ್ ಅಧ್ಯಕ್ಷ ಪ್ರಶಾಂತ ಪ್ರಕಾಶ್, ಸಿಇಒ ಸಿ.ಎಂ.ಪಾಟೀಲ್, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಜಿಪಂ ಸಿಇಒ ಇಕ್ರಂ,ಚಕ್ರಭಾವಿಯ ಎಫ್‌ಬಿಒ ಸಿಇಒ ಬೈರೇಶ್, ಕೆಂಗಲ್ ಎಫ್‌ಬಿಒ ಸಿಇಒ ಜ್ಯೋತಿ, ಅರ್ಕಾವತಿ ಎಫ್‌ಪಿಒ ಸಿಇಒ ವನಿತಾ ಮತ್ತಿತರರು ಸಭೆಯಲ್ಲಿದ್ದರು.

ಕ್ಷೇತ್ರದ ಸಮಸ್ಯೆಗಳ ಮಾಹಿತಿ :  ಜಿಲ್ಲೆಯಲ್ಲಿ ಕೃಷಿ ಮತ್ತು ರೈತರ ಸಂಘಗಳ ನಡುವೆ ಸೌಹಾರ್ದತೆ ಮತ್ತು ಸಹಯೋಗ ಹೆಚ್ಚಿ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವಿವಿಧ ಸಂಘಗಳ ಮುಖ್ಯಸ್ಥರ ಜತೆ ಅಶ್ವತ್ಥನಾರಾಯಣ ಸಭೆ ಸಂವಾದ ನಡೆಸಿದರು. ಈ ವೇಳೆ ವಿವಿಧ ಕೃಷಿ ಕ್ಷೇತ್ರದ ಸಮಸ್ಯೆಗಳು-ಸವಾಲುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈಗ ಎಲ್ಲ ಕ್ಷೇತ್ರಗಳೂ ಡಿಜಿಟಲೀಕರಣ ಆಗುತ್ತಿದ್ದು, ಜಿಲ್ಲೆಯಲ್ಲಿ ಡಿಜಿಟಲೀಕರಣ ಮಾಡುವ ಬಗ್ಗೆ ಮೊದಲ ಪೈಲೆಟ್ ಪ್ರಾಜೆಕ್ಟ್ ಜಾರಿಗೆ ಬರುತ್ತಿದೆ. ರೈತರಿಗೆ ತಾಂತ್ರಿಕತೆ ಕಲಿಸುವ ಉದ್ದೇಶದ ಜತೆಗೆ, ಸಣ್ಣ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ಉದ್ದಿಮೆದಾರರು ಸೃಷ್ಟಿಯಾಗಬೇಕು. ರೈತರ ಉತ್ಪಾದಕ ಸಂಘಗಳು ಮತ್ತು ರೈತರ ನಡುವೆ ಹೆಚ್ಚೆಚ್ಚು ಸಂಪರ್ಕ ಕಲ್ಪಿಸಿ ರೈತರ ಆದಾಯ ಹೆಚ್ಚಿಸಬೇಕು. ಕೃಷಿ ಕ್ಷೇತ್ರವನ್ನು ಉತ್ಪಾದಕ ಕಂಪನಿಯಂತೆ ಪರಿವರ್ತಿಸುವ ನಿಟ್ಟಿನಲ್ಲಿ ಕೃಷಿ ಉತ್ಪಾದಕ ಸಂಘಗಳು ಕೆಲಸ ಮಾಡಬೇಕು ಎಂದು ಎಂದು ಅಶ್ವತ್ಥನಾರಾಯಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net