

Krissann Barretto: ಬಾಲಿವುಡ್ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ (Sushant ) ಸಾವಿನ ಪ್ರಕರಣದಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದೆ. ಸುಶಾಂತ್ ಸಾವಿನಲ್ಲಿ ಯಾವುದೇ ಪಿತೂರಿ ಇಲ್ಲ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಇತ್ತೀಚೆಗೆ ಪ್ರಕರಣವನ್ನು ಮುಕ್ತಾಯಗೊಳಿಸಿತು. ಇದೇ ಸಮಯದಲ್ಲಿ, ನಟಿ ರಿಯಾ ಚಕ್ರವರ್ತಿಗೂ ಸುಶಾಂತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ವರದಿಯಲ್ಲಿ ಹೇಳಲಾಯಿತು. ಇದರ ಬೆನ್ನಲ್ಲೇ ಸುಶಾಂತ್ ಸಾವಿನ ವಿಚಾರದಲ್ಲಿ ಮತ್ತೊಮ್ಮೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಓದು, ನಟನೆ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಅದ್ಭುತ ಪಾಂಡಿತ್ಯವನ್ನು ಹೊಂದಿದ್ದ ಸುಶಾಂತ್ ಸಿಂಗ್ ಅವರ ಸಾವಿನ ಸುದ್ದಿ, ಅವರ ಕುಟಂಬಸ್ಥರನ್ನು ಮಾತ್ರವಲ್ಲದೇ ಆತ್ಯಾಪ್ತರ ನೆಮ್ಮದಿಯನ್ನೇ ಛಿದ್ರಗೊಳಿಸಿತು. ಸುಶಾಂತ್ ಆಪ್ತ ಸ್ನೇಹಿತರ ಪೈಕಿ ಜನಪ್ರಿಯ ಟಿವಿ ಧಾರವಾಹಿಯಲ್ಲಿ ಮಿಂಚಿದ ನಟಿ ಕ್ರಿಸ್ಸನ್ ಬ್ಯಾರೆಟ್ಟೊ, ಸುಶಾಂತ್ ಸಾವಿನಿಂದ ತನಗೆ ಉಂಟಾದ ನೋವು, ನಷ್ಟ, ಪರಿಸ್ಥಿತಿ ಕುರಿತು ಕಡೆಗೂ ಮೌನ ಮುರಿದಿದ್ದಾರೆ.
ಈ ಕುರಿತು ಇತ್ತೀಚಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ನಟಿ, "ಸುಶಾಂತ್ ಸಾವಿನ ಸುದ್ದಿ ನನ್ನನ್ನು ನಿಂತಲ್ಲೇ ಕುಸಿಯುವಂತೆ ಮಾಡಿತು. ಆ ಸಮಯದಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಗ್ಗೆ ಮಾತನಾಡಲು ನಾನು ಆಯ್ಕೆ ಮಾಡಿಕೊಂಡಾಗ ತೀವ್ರ ಟೀಕೆಗಳನ್ನು ಎದುರಿಸಿದೆ. ಕೆಲವು ನಿರ್ಮಾಣ ಸಂಸ್ಥೆಗಳಿಂದ ಭಾರೀ ವಿರೋಧಗಳ ಜತೆಗೆ ಉದ್ಯೋಗವನ್ನೂ ಕಳೆದುಕೊಂಡೆ. ಇದು ನನ್ನನ್ನು ಸಂಪೂರ್ಣ ಕಂಗಾಲಾಗಿಸಿತು" ಎಂದರು.
"ನಿಮ್ಮ ಸ್ನೇಹಿತರೊಬ್ಬರು ಅಕಾಲಿಕ ಮರಣ ಹೊಂದಿದರೆ, ಅವರ ಬಗ್ಗೆ ನೀವೇನಾದರೂ ಹೇಳಲು ಹೋದರೆ, ಜನರು ನೀವು ಗಮನ ಸೆಳೆಯಲು ಇಂತಹ ಪೋಸ್ಟ್ ಹಾಕುತ್ತಿದ್ದೀರಿ ಎಂದು ಭಾವಿಸುತ್ತಾರೆ. ನೀವು ಕ್ಯಾಮೆರಾ ಮುಂದೆ ಬರುವುದರಿಂದ, ನೀವು ಇತರರ ಗಮನ, ಪರೋಕ್ಷ ಪ್ರಚಾರ ಪಡೆಯುತ್ತಿದ್ದೀರಿ ಎಂದೆಲ್ಲ ಮಾತನಾಡುತ್ತಾರೆ. ಅಸಲಿಗೆ ಇಲ್ಲಿ ನೈಜ ಭಾವನೆಗೆ ಅವಕಾಶವೇ ಇಲ್ಲ. ಅಂದು ಸುಶಾಂತ್ ಬಗ್ಗೆ ಮಾತನಾಡಲು ಯತ್ನಿಸಿದ್ದಕ್ಕೆ ನನ್ನ ವೃತ್ತಿಜೀವನವನ್ನೇ ಪಣಕ್ಕಿಡಬೇಕಾಯಿತು. ಇದೊಂದು ವಿಚಾರಕ್ಕೆ ನನ್ನ ಹೆತ್ತವರೇ ನನ್ನ ವಿರುದ್ಧ ಬೇಸರಗೊಂಡಿದ್ದರು" ಎಂದು ಕ್ರಿಸ್ಸನ್ ಬ್ಯಾರೆಟ್ಟೊ ಹೇಳಿದ್ದಾರೆ,(ಏಜೆನ್ಸೀಸ್).