ಕೃಷ್ಣ ಸಂದೇಶಗಳು ಇಂದಿಗೂ ಪ್ರಸ್ತುತ

8sri-1
ಶೃಂಗೇರಿಯಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿದರು. ಡಾ.ಕೆ.ಸಿ.ನಾಗೇಶ್, ಕಿರಣ್‌ಕುಮಾರ್ ಇದ್ದರು.
Published on

ಶೃಂಗೇರಿ: ಜೀವನದ ಅರಿವು, ಆತ್ಮ, ಪರಮಾತ್ಮ ನಡುವಿನ ಸಂಬಂಧ, ಅವಶ್ಯಕವಾಗಿ ಮಾಡಬೇಕಾದ ಕರ್ಮ, ಬದುಕಿನಲ್ಲಿ ಬವಣೆ ಎದುರಾದಾಗ ತಾಳ ಬೇಕಾದ ನಿಲುವು ಕುರಿತು ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ ಪ್ರಸ್ತುತ ಸನ್ನಿವೇಶದಲ್ಲಿ ಉಪಯುಕ್ತವಾಗಿದೆ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಶಾಖಾಮಠದಲ್ಲಿ ಶುಕ್ರವಾರ ಆಯೋಜಿಸಿದ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶ್ರೀಕೃಷ್ಣ ಭಗವತ್‌ಗೀತೆಯಲ್ಲಿ ಮನುಷ್ಯನು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಕುರಿತು ಉಪದೇಶ ನೀಡಿದ್ದಾನೆ. ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗದ ಕುರಿತು ಆತನು ಹೇಳಿರುವ ಸಂದೇಶಗಳನ್ನು ಸರ್ವರೂ ಮನನ ಮಾಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಈ ಮೂರು ಯೋಗಗಳು ಪ್ರಮುಖವಾದ ತತ್ವ ಪಾಠಗಳು ಎಂದರು.
ಮನುಷ್ಯ ತನಗೆ ತಾನೇ ಶತ್ರು ಮತ್ತು ತನಗೆ ತಾನೇ ಮಿತ್ರ. ಗುರುವಿನ ಮಾರ್ಗದರ್ಶನವಿದ್ದರೆ ವ್ಯಕ್ತಿ ನಡೆಯುವ ಹಾದಿ ಸುಲಲಿತವಾಗಲು ಸಾಧ್ಯ. ಮಕ್ಕಳು ದೇಶದ ಭವಿಷ್ಯದ ಬೆಳಕು ಅವರು ಸರಿಯಾದ ಹಾದಿಯಲ್ಲಿ ಮುನ್ನಡೆಯಬೇಕಾದರೆ ಸಂಸ್ಕಾರ, ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ರೂಪಿಸಿಕೊಳ್ಳಬೇಕು ಎಂದರು.
ಶಾಲಾ ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಸಿ.ನಾಗೇಶ್,ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕಿರಣ್‌ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net