ಕೃಷ್ಣಾ ಮೇಲ್ದಂಡೆ ಯೋಜನೆ; ರೈತರ ಪರಿಹಾರಕ್ಕೆ 78 ಸಾವಿರ ಕೋಟಿ ರೂ.: ಸಂಪುಟ ಸಭೆಯಲ್ಲಿ ತೀರ್ಮಾನ!

Untitled design - 2025-10-10T073420.014
Published on

ಇತ್ತೀಚೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಪ್ರದೇಶದ ರೈತರ ಪರಿಹಾರಕ್ಕೆ 78 ಸಾವಿರ ಕೋಟಿಯನ್ನು ಮುಂದಿನ ಮೂರು ವರ್ಷಗಳಲ್ಲಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ‘ನೀರಿದ್ದರೆ ನಾಳೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಯೋಜನೆಗೆ ಒಟ್ಟು 2 ಲಕ್ಷ ಕೋಟಿ ಅಗತ್ಯವಿದೆ. ಬಿಜೆಪಿ ಸರ್ಕಾರ ತನ್ನದೇ ಆದ ಪರಿಹಾರ ಘೋಷಿಸಿತ್ತು. ಆದರೆ ರೈತರು ಒಪ್ಪಿರಲಿಲ್ಲ. ನಾವು ರೈತರ ಹಿತ ಕಾಯಲು ಎಕರೆಗೆ 35-40 ಲಕ್ಷ ಪರಿಹಾರ ನೀಡಲು ತೀರ್ಮಾನ ಮಾಡಿದ್ದು, ರೈತರನ್ನು ಒಪ್ಪಿಸಿದ್ದೇವೆ. ಈ ಯೋಜನೆ ಅಧಿಸೂಚನೆ ಹೊರಡಿಸುವ ವಿಚಾರವಾಗಿ ನಾನು ಸುಮಾರು 10 ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ. ಅವರು ನಮ್ಮ ವಾದ ಒಪ್ಪಿದರು ಎಂದರು.

ಮೇಕೆದಾಟು ಯೋಜನೆ: ಶೀಘ್ರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ

"ಮೇಕೆದಾಟು ಯೋಜನೆಯಿಂದ ನಮ್ಮ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ. ಈ ಸಮತೋಲಿತ ಅಣೆಕಟ್ಟಿನಿಂದ ಕುಡಿಯುವ ನೀರು ಪಡೆಯಬಹುದೇ ಹೊರತು ನಾವು ನೀರಾವರಿಗೆ ನೀರು ಪಡೆಯಲು ಆಗುವುದಿಲ್ಲ. ಕಷ್ಟ ಕಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜನರ ಹಿತ ಕಾಯಲು ಸಾಧ್ಯವಾಗಲಿದೆ. 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಬಗ್ಗೆ ನೆರೆ ರಾಜ್ಯದ ಸಹೋದರರಿಗೂ ಅರಿವಿದೆ. ಆದರೆ ಅವರ ಆಂತರಿಕ ರಾಜಕಾರಣದಿಂದ ಇದನ್ನು ವಿರೋಧಿಸುತ್ತಿದ್ದಾರೆ. ಈ ವಿಚಾರ ಸಧ್ಯದಲ್ಲೇ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆ ನಡೆಯಲಿದ್ದು, ನಮಗೆ ನ್ಯಾಯ ಸಿಗಲಿ ಎಂದು ದೇವರಲ್ಲಿ ಹಾಗೂ ನ್ಯಾಯಾಧೀಶರಿಗೆ ಇಲ್ಲಿಂದಲೇ ಪ್ರಾರ್ಥಿಸುವೆ. ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ನಮ್ಮ ಹಕ್ಕಿನ ನೀರು ನಾವು ಬಳಸಿಕೊಳ್ಳಲು ಬಯಸುತ್ತೇವೆ" ಎಂದರು.

ಆಂಧ್ರ ಸರ್ಕಾರ ಸಹಕಾರ ನೀಡುತ್ತಿಲ್ಲ

"ಇನ್ನು ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಪರಿಣಾಮ 30% ನೀರು ವ್ಯರ್ಥವಾಗುತ್ತಿದೆ. ಈ ಬಗ್ಗೆ ತೆಲಂಗಾಣ ಹಾಗೂ ಆಂಧ್ರ ಸಿಎಂ ಬಳಿ ಸಭೆ ಮಾಡಲು ಮನವಿ ಮಾಡಿದ್ದೇವೆ. ಆದರೆ ಆಂಧ್ರ ಸಿಎಂ ಸಮಯ ನೀಡುತ್ತಿಲ್ಲ. ಈ ವಿಚಾರದಲ್ಲಿ ಎಲ್ಲಾ ರಾಜ್ಯಗಳು ಸೇರಿ ತುಂಗಭದ್ರಾ ಮಂಡಳಿ ಮೂಲಕವೇ ತೀರ್ಮಾನ ಮಾಡಬೇಕು. ಈ ವ್ಯರ್ಥದ ನೀರು ಉಳಿಸಿಕೊಂಡರೆ ನಮ್ಮ ಹಾಗೂ ಆ ರಾಜ್ಯದ ರೈತರಿಗೆ ನೇರವಾಗುತ್ತದೆ. ಆದರೆ ಅವರಿಗೆ ರಾಜಕಾರಣವೇ ಮುಖ್ಯವಾಗಿದೆ" ಎಂದರು.

ಕೇಂದ್ರ ಸಚಿವರು ಜನರ ಪರ ಧ್ವನಿ ಎತ್ತುತ್ತಿಲ್ಲ

"ಕೃಷ್ಣಾ ನದಿ ನೀರಿನ ಬಳಕೆಗೆ 2010ರಲ್ಲೇ ಹಂಚಿಕೆ ಆಗಿದ್ದರೂ ಕೇಂದ್ರ ಸರ್ಕಾರದ ಅಧಿಸೂಚನೆ ಬಾಕಿ ಇದೆ. ನಾವು ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಮುಂದಾದರೂ ಮಹಾರಾಷ್ಟ್ರ ಹಾಗೂ ಆಂಧ್ರದವರು ಕೇಂದ್ರ ಸಚಿವರ ಸಭೆ ಮುಂದೂಡಿಸಿದ್ದಾರೆ. ಈಗ ಮಹಾರಾಷ್ಟ್ರದವರು ನಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಸಂಸದರು, ಕೇಂದ್ರ ಮಂತ್ರಿಗಳು ಮಹಾರಾಷ್ಟ್ರದ ನಡೆಯನ್ನು ವಿರೋಧಿಸಿ ರಾಜ್ಯದ ಜನರ ಪರ ಧ್ವನಿ ಎತ್ತುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net