ಕೆ.ಆರ್. ನಗರದಲ್ಲಿ ಸಡಗರದ ಶ್ರೀಕೃಷ್ಣ ಜನ್ಮಾಷ್ಟಮಿ

0-3248x1440-0-0#
ಕೆ.ಆರ್. ನಗರದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಕೃಷ್ಣ ಮತ್ತು ರಾಧೆ ವೇಷಧಾರಿ ಪುಟಾಣಿಗಳು.
Published on

ಕೆ.ಆರ್. ನಗರ : ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನದ ಬಳಿ ಇರುವ ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು.

ಜಯಂತಿ ಅಂಗವಾಗಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಮಕ್ಕಳು ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಣ್ಣ ಬಣ್ಣದ ಚಿತ್ತಾರಗಳ ಬಿಡಿಸುವ ಮೂಲಕ ತಮ್ಮ ಕೈಚಳಕ ಪ್ರದರ್ಶಿಸಿದರು. ದಾಸರ ಪದ ಸ್ಪರ್ಧೆಯಲ್ಲಿ ಅನೇಕ ಮಕ್ಕಳು ಭಾಗವಹಿಸುವ ಮೂಲಕ ಸಂಗೀತ ಪ್ರೌಢಿಮೆ ಪ್ರದರ್ಶಿಸಿದರು.

ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ ಅಲಂಕಾರ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಸಲಾಯಿತು. ಮಹಾಪೂಜೆಗೂ ಮುನ್ನ ಪ್ರತಿಷ್ಠಾನದ 60ಕ್ಕೂ ಹೆಚ್ಚು ಸದಸ್ಯರು ಶ್ರೀಕೃಷ್ಣ ದೇವರ ಸಾನ್ನಿಧ್ಯದಲ್ಲಿ ಕುಳಿತು ವಿಷ್ಣು ಸಹಸ್ರನಾಮ ಪಠಿಸುವ ಮೂಲಕ ಲಕ್ಷ ತುಳಸಿ ಅರ್ಚನೆಯನ್ನು ಭಕ್ತಿ ಭಾವದಿಂದ ನೆರವೇರಿಸಿದರು.

ಬಾಲ ಗೋಕುಲ ಮೆರವಣಿಗೆ: ಮಧ್ಯಾಹ್ನ 3 ಗಂಟೆಗೆ 150ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಬಾಲ ಗೋಕುಲ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧೆ ವೇಷದ ಉಡುಗೆಗಳನ್ನು ತೊಡಿಸಿ ಸಂಭ್ರಮಿಸಿದರು.

ಸ್ಪರ್ಧೆ ನಂತರ ಶ್ರೀಕೃಷ್ಣ, ರಾಧೆ ವೇಷ ತೊಟ್ಟ ಮಕ್ಕಳನ್ನು ಆಟೋ, ಟ್ರ್ಯಾಕ್ಟರ್, ಸ್ಕೂಟರ್‌ಗಳ ಮೇಲೆ ಕೂರಿಸಿ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಪ್ರತಿಷ್ಠಾನದ ಸದಸ್ಯರು ಕೃಷ್ಣನಾಮ ಸಂಕೀರ್ತನೆಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮಹಿಳಾ ಸದಸ್ಯರು ಸಹ ಭಜನಾ ಕುಣಿತದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.

ಮೆರವಣಿಗೆ ನಂತರ ಕೃಷ್ಣ ರಾಧೆ ವೇಷಧಾರಿಗಳಿಗೆ ಮೊಸರು ಕುಡಿಕೆ ಏರ್ಪಡಿಸಲಾಗಿತ್ತು . ವೇಷಧಾರಿಗಳು ಕೋಲುಗಳನ್ನು ಹಿಡಿದು ತಿನಿಸುಗಳಿರುವ ಮಡಿಕೆಗಳನ್ನು ಒಡೆಯಲು ನೆಗೆದು ಸಂಭ್ರಮಿಸಿದರು. ಮೊಸರು ಕುಡಿಕೆ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು. ಕೊನೆಯಲ್ಲಿ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಸಿಹಿ ತಿಂಡಿ, ಗಿಫ್ಟ್ ನೀಡಿ ಪ್ರೋತ್ಸಾಹಿಸಲಾಯಿತು.

ಮೆರಣಿಗೆಯಲ್ಲಿ ಶ್ರೀಕೃಷ್ಣ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಮೋಹನ್ ದಾಸ್ ಭಟ್, ಡಾ.ಜನಾರ್ಧನ ಭಟ್, ಡಾ.ಗೋವರ್ಧನಾಚಾರ್, ಎ.ನಾಗರಾಜ್, ಯು.ಎ.ಕೃಷ್ಣ ಭಟ್, ನಾಗರಾಜ ಪುರಾಣಿಕ್, ಕೃಷ್ಣಮೂರ್ತಿ, ಕೆ.ನಾಗೇಶ್, ಚೈತನ್ಯ, ಕೇಶವ, ರಘು, ಪದ್ಮನಾಭ, ಆಟೋ ಶಂಕರ್, ಹೃಷಿಕೇಶ್, ಆನಂದ್, ಶ್ರೀಹರ್ಷ, ಶಮಂತ್, ಶ್ರೀನಿಧಿ, ರಮಾನಂದ್, ಪ್ರಶಾಂತ್, ಪ್ರದೀಪ್, ಡಾ.ಅಕ್ಷತಾ, ಅರ್ಪಿತ, ಶ್ರೀರಕ್ಷಾ ,ವರುಣ್, ಮೋಹನ್ ರಾವ್, ಹರಿಯಣ್ಣ, ಅಮೋದ್, ಮತ್ತು ಶ್ರೀಕೃಷ್ಣ ಭಜನಾ ಮಂಡಳಿ ಮಹಿಳಾ ಸದಸ್ಯರಾದ ಶೋಭಾ ಹೃಷಿಕೇಶ್, ಸತ್ಯವತಿ ರಮೇಶ್ ಸೇರಿದಂತೆ ಅನೇಕ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net