ಕೃಷ್ಣಜನ್ಮಸ್ಥಾನ-ಶಾಹಿ ಈದ್ಗಾ ಮಸೀದಿ ವಿವಾದ 19ಕ್ಕೆ ತೀರ್ಮಾನ

Shahi
Published on

ನವದೆಹಲಿ: ದೇಶದ ಧಾರ್ಮಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದ ಪ್ರಕರಣದಲ್ಲಿ ಮಥುರಾದ ಕೆಳ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಈ ಪ್ರಕರಣದ ಬಗ್ಗೆ ಮೇ 19ರಂದು ತೀರ್ಮಾನ ಮಾಡುವುದಾಗಿ ತಿಳಿಸಿದೆ. ಶ್ರೀಕೃಷ್ಣ ಜನ್ಮಭೂಮಿಯ 13.37 ಎಕರೆ ಜಮೀನಿನ ಮಾಲೀಕತ್ವವನ್ನು ಕೋರಿ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ, ಕೃಷ್ಣನ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ವಕೀಲೆ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಕಳೆದ ವರ್ಷ ಸಿವಿಲ್​ ನ್ಯಾಯಾಲಯದಲ್ಲಿ ಜಮೀನಿನ ಮೇಲಿನ ಹಕ್ಕನ್ನು ಕೋರಿ ಮನವಿ ಸಲ್ಲಿಸಿದ್ದರು ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್​ ವಕ್ಫ್​ ಬೋರ್ಡ್​, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್​ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಟ್ರಸ್ಟ್​ಗೆ ಒಳಪಡುವ ಭೂಮಿಯಲ್ಲಿ ನಿರ್ಮಿಸಲಾದ ಈದ್ಗಾವನ್ನು ಅಕ್ರಮ ಎಂದು ಘೋಷಿಸಿ, ಮಸೀದಿಯನ್ನು ಕೆಡವಿ ಹಾಕಬೇಕು. ಸಂಪೂರ್ಣ ಭೂಮಿಯನ್ನು ಅದರ ಮೂಲ ಮಾಲೀಕ ಭಗವಾನ್​ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿವಾದಿತ ಸ್ಥಳದಲ್ಲಿ ಉತ್ಖನನ ನಡೆಸಿ, ತನಿಖಾ ವರದಿ ಸಲ್ಲಿಸುವಂತೆಯೂ ಅರ್ಜಿದಾರರು ಒತ್ತಾಯಿಸಿದ್ದಾರೆ. ಮಸೀದಿ ನಿರ್ಮಾಣ ಮಾಡಿದ ಸ್ಥಳದಲ್ಲಿ ಮಥುರಾದ ರಾಜ ಕಂಸನು ನಿರ್ಮಾಣ ಮಾಡಿದ್ದ ಜೈಲು ವಿಸ್ತರಣೆಗೊಂಡಿರುವುದಲ್ಲದೆ, ಈಗಲೂ ಅಸ್ತಿತ್ವದಲ್ಲಿದೆ. ಇದು ಉತ್ಖನನ ಮೂಲಕ ಸಾಬೀತಾಗಲಿದೆ ಎಂದು ವಿವರಿಸಲಾಗಿದೆ. ವಿವಾದದ ಕುರಿತು ವಿವಿಧ ನ್ಯಾಯಾಲಯಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆ

ಕೋರ್ಟ್​ ಆದೇಶದ ಮೇರೆಗೆ ಕಾಶಿ ವಿಶ್ವನಾಥ ಮಂದಿರ ಸಂಕೀರ್ಣದಲ್ಲಿರುವ ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀೆ ನಡೆಸಲು ತೆರಳಿದ್ದ ತಂಡಕ್ಕೆ ಅಲ್ಲಿನ ಕೆಲ ಸ್ಥಳಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸಮೀೆ ಕಾರ್ಯ ಶನಿವಾರ ಸ್ಥಗಿತಗೊಂಡಿದೆ. ಮಸೀದಿಯ ಹೊರಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೋರ್ಟ್​ ನೇಮಕ ಮಾಡಿರುವ ಸಮಿತಿಯ ಕಮಿಷನರ್​ ಪಕ್ಷಪಾತಿ ಧೋರಣೆ ಹೊಂದಿದ್ದಾರೆ. ಅವರನ್ನು ಕೈಬಿಡಬೇಕು ಎಂದು ಆಗ್ರಹಿಸಿ ಅಡ್ವೋಕೇಟ್​ ರಿಯಾಜ್​ ಅಹ್ಮದ್​ ಎಂಬುವವರು ಕೋರ್ಟ್​ಗೆ ಅರ್ಜಿ ಅಲ್ಲಿಸಿದ್ದಾರೆ. ಮೇ 9ರಂದು ಇದರ ವಿಚಾರಣೆ ನಡೆಯಲಿದೆ. ಮಸೀದಿ ಒಳಗೆ ಚಿತ್ರೀಕರಣ ನಡೆಸುವುದನ್ನು ಮಸೀದಿಯ ಉಸ್ತುವಾರಿ ಸಮಿತಿ ವಿರೋಧಿಸಿದೆ.

ಒಪ್ಪಂದವೇ ಅಕ್ರಮ

ಶ್ರೀಕೃಷ್ಣ ಜನ್ಮಭೂಮಿಯ ಜಮೀನನ್ನು ಒಪ್ಪಂದದ ಮೂಲಕ ಮಸೀದಿಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಲಾದ ಅರ್ಜಿ ಬಾಕಿ ಉಳಿದಿದೆ. ಕೃಷ್ಣ ಜನ್ಮಭೂಮಿ ಟ್ರಸ್ಟ್​ನ ಆಸ್ತಿಯನ್ನು ಹಿಂದೂಗಳಿಗೆ ವಂಚಿಸಿ ಶಾಹಿ ಈದ್ಗಾದೊಂದಿಗೆ ಅನಧಿಕೃತವಾಗಿ ರಾಜಿ ಮಾಡಿಕೊಳ್ಳುವ ಮೂಲಕ ನೀಡಿರುವುದು ತಪ್ಪು. ಆಗಸ್ಟ್​ 12, 1968ರಂದು ಶಾಹಿ ಈದ್ಗಾದೊಂದಿಗೆ ಶ್ರೀಕೃಷ್ಣ ಜನ್ಮ ಸೇವಾ ಸಂಸ್ಥಾನವು ಮಾಡಿಕೊಂಡಿರುವ ಒಪ್ಪಂದ ಕಾನೂನಿನ ವ್ಯಾಪ್ತಿಯಿಲ್ಲದೆ ಸಹಿ ಮಾಡಿರುವ ಒಪ್ಪಂದ ಎಂದು ನ್ಯಾಯಾಲಯ ೂಷಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಠಾಕೂರ್​ ಕೇಶವ ದೇವ್​ ಮಹಾರಾಜ್​ ಕತ್ರಾ ಅವರಿಗೆ ಸೇರಿದ 13.37 ಎಕರೆ ಜಾಗದಲ್ಲಿ ಶಾಹಿ ಈದ್ಗಾ ನಿರ್ಮಾಣಗೊಂಡಿದೆ. ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿಯ ನಡುವಿನ ಒಪ್ಪಂದವೇ ಅಕ್ರಮ. ಏಕೆಂದರೆ, ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಈ ಜಮೀನಿನ ಮೇಲೆ ಯಾವುದೇ ಶಾಸನಬದ್ಧ ಹಕ್ಕಿಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net