ಶ್ರೀಕೃಷ್ಣನಿಂದ ಗೋಕುಲದಲ್ಲಿ ಸಮೃದ್ಧಿ

Published on

| ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಉತ್ತರಾದಿ ಮಠ, ಬೆಂಗಳೂರು

ಗೋಪಿಕಾಸ್ತ್ರೀಯರು ಶ್ರೀಕೃಷ್ಣನನ್ನು ಅನನ್ಯವಾಗಿ ಆರಾಧಿಸುತ್ತಿದ್ದಾರೆ. ಶ್ರೀಕೃಷ್ಣ ನೀನು ಎಲ್ಲಿ ಇರುವೆ ಅಲ್ಲಿ ಸಮೃದ್ಧಿ. ನೀನು ಮಾತ್ರ ಅಲ್ಲ. ಕೃಷ್ಣಾಶ್ರಯೋ ವಸತಿ ಯತ್ರ ಜನೊà—ಪಿ ತತ್ರ ವೃದ್ಧಿರ್ಭವೇತ್ -ಶ್ರೀಕೃಷ್ಣನ ಭಕ್ತರು ಎಲ್ಲಿ ಇದ್ದಾರೋ ಅಲ್ಲಿ ಸುಭಿಕ್ಷೆ ಆಗುತ್ತದೆ ಎಂದಿರುವಾಗ ಸಾಕ್ಷಾತ್ ರಮಾಪತಿಯಾದ ಶ್ರೀಕೃಷ್ಣ ನೀನು ಗೋಕುಲಕ್ಕೆ ಬಂದ ಮೇಲೆ ಅಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಏನು ಹೇಳುವುದು.

ಶ್ರೀಕೃಷ್ಣ ಯಾವತ್ತು ಗೋಕುಲವನ್ನು ಪ್ರವೇಶ ಮಾಡಿದನೊ ಅಂದಿನಿಂದ ಗೋಕುಲದಲ್ಲಿ ಪ್ರತಿದಿನವೂ ಉತ್ಕರ್ಷವೇ. ಎಲ್ಲ ವಿಧವಾದ ಆಪತ್ತುಗಳ ಪರಿಹಾರ ಅನಾಯಾಸವಾಗಿ ಆಗಿದೆ. ಶತ್ರುಗಳು ಬಂದರು. ಅಸುರರು ಬಂದರು. ಏನು ಮಾಡಬೇಕು? ಹೇಗೆ ಸೈನಿಕರನ್ನು ಸಿದ್ಧಪಡಿಸಬೇಕು? ಎಲ್ಲಿ ನಿಂತು ಯುದ್ಧ ಮಾಡಬೇಕು? ಅವರನ್ನು ಹೇಗೆ ವಿರೋಧಿಸಬೇಕು? ಇದಾವುದರ ಚಿಂತೆಯೇ ಇಲ್ಲದಂತೆ ನಂದ ಸುಖವಾಗಿ ಇದ್ದು ಬಿಟ್ಟಿದ್ದಾನೆ. ದುಷ್ಟರು ತಮ್ಮಷ್ಟಕ್ಕೆ ತಾವೇ ದೀಪದ ಹುಳು ಸತ್ತು ಬಿದ್ದ ಹಾಗೆ ಸತ್ತು ಬಿದ್ದಿದ್ದಾರೆ.

ಶ್ರೀಕೃಷ್ಣನ ಆವಾಸ ಸ್ಥಾನ ಇದೆ ಅನ್ನುವುದಕ್ಕಾಗಿ ಗೋಕುಲಕ್ಕೆ ಉತ್ಕರ್ಷ. ಶ್ರೀಕೃಷ್ಣ ಇದ್ದ ಮೇಲೆ ಲಕ್ಷ್ಮೀದೇವಿಯೂ ಅಲ್ಲಿಯೇ ವಾಸಮಾಡಿದ್ದಾಳೆ. ಲಕ್ಷ್ಮೀ ದೇವಿ ಇದ್ದ ಮೇಲೆ ಸಂಪತ್ತು, ಕೀರ್ತಿ ಎಲ್ಲವೂ ಗೋಕುಲದಲ್ಲಿ ನೆಲೆಸಿದೆ. ‘ನಿಜವಾದ ಅಮೃತತ್ತ್ವವನ್ನು ನೀಡುವ ನಿನ್ನ ಕೈಗಳನ್ನು ಲಕ್ಷ್ಮೀದೇವಿಯವರು ತಮ್ಮ ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ. ಆ ಕೈ ಸಮಸ್ತ ಜಗತ್ತಿಗೆ ಮೋಕ್ಷವನ್ನು ಕೊಡುತ್ತದೆ. ಅಂತಹ ಕೈಗಳಿಂದ ನಮ್ಮ ಸಂಸಾರ ಭಯವನ್ನು ಪರಿಹಾರ ಮಾಡು. ನಾವು ಕ್ಷುದ್ರ ಕಾಮನೆಯಿಂದ ನಿಮ್ಮನ್ನು ಭಜಿಸಿದವರಲ್ಲ. ನಾವು ಅಪ್ಸರಾಸ್ತ್ರೀಯರು. ನೀನು ಸವೋತ್ತಮ, ನಿನ್ನ ಅನುಗ್ರಹದಿಂದ ನಮಗೆ ಈ ಸಂಸಾರ ಭಯ ಹೋಗಬೇಕು. ನಿನ್ನ ಕಥೆಯನ್ನು ಕೇಳಿದರೆ ಸಾಕು ಎಲ್ಲ ಕಷ್ಟಗಳು ಸುಟ್ಟು ಹೋಗುತ್ತವೆ. ಸಂಸಾರದ ಭಯಗಳು ದೂರವಾಗುತ್ತವೆ. ಅಂತಹ ನಿನ್ನ ಕಥೆಯನ್ನು ನಿರಂತರ ಕೇಳುವಂತೆ ಅನುಗ್ರಹವನ್ನು ಮಾಡು ಎಂದು ಬೇಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net