ಆಸ್ಟ್ರೇಲಿಯಾ ಸಂಸ್ಥೆ ಜತೆಗೆ ಕ್ರೆಡಲ್ ಶುದ್ಧ ಇಂಧನ ಒಪ್ಪಂದ

Energy agreement
Published on

ಬೆಂಗಳೂರು: ನವೀಕರಿಸಬಹುದಾದ, ಹಸಿರು ಇಂಧನ ವಲಯದಲ್ಲಿ ಆಸ್ಟ್ರೇಲಿಯಾದ ಸ್ಮಾರ್ಟ್ ಎನರ್ಜಿ ಕೌನ್ಸಿಲ್ ಜತೆಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್)ವು ಒಪ್ಪಂದ ಮಾಡಿಕೊಂಡಿದೆ.

ಇಂಧನ ಇಲಾಖೆ ಪ್ರತಿನಿಧಿಯಾಗಿ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಸ್ಮಾರ್ಟ್ ಎನರ್ಜಿ ಕೌನ್ಸಿಲ್ ಪರವಾಗಿ ಅದರ ಮುಖ್ಯ ಕಾರ್ಯನಿರ್ವಾಹಕ ಜಾನ್ ಗ್ರಿಮ್ಸ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಗ್ರೀನ್ ಹೈಡ್ರೋಜನ್, ಬ್ಯಾಟರಿ ಪವರ್ ಸ್ಟೋರೇಜ್, ವ್ಯವಸ್ಥೆಗಳು ಹಾಗೂ ಸಂಬಂಧಿತ ವಲಯಗಳ ಹೆಚ್ಚಿನ ಸಹಕಾರ ಗುರಿ ಹೊಂದಿದೆ. ಮುಂದಿನ ಮೂರು ವರ್ಷಗಳ ಈ ಒಪ್ಪಂದ ಜಾರಿಯಲ್ಲಿರಲಿದ್ದು, ಪರಸ್ಪರ ಒಪ್ಪಿತವಾದರೆ ಅವಧಿ ವಿಸ್ತರಿಸಲು ಅವಕಾಶವಿದೆ.

ಹೂಡಿಕೆ ಅವಕಾಶಗಳ ಅನ್ವೇಷಣೆ

ಶುದ್ಧ ಇಂಧನ ವಲಯದಲ್ಲಿ ಪರಸ್ಪರ ಸಹಕಾರ ಬಲಪಡಿಸಲು, ನೂತನ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವುದು, ಪಾಲುದಾರಿಕೆಯನ್ನು ಸುಲಲಿತಗೊಳಿಸುವ ಜತೆಗೆ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವುದು ಈ ಒಪ್ಪಂದದ ಗುರಿಯಾಗಿದೆ ಎಂದು ಕೆ.ಪಿ. ರುದ್ರಪ್ಪಯ್ಯ ತಿಳಿಸಿದ್ದಾರೆ.

ಶುದ್ಧ ಇಂಧನಕ್ಕೆ ಒತ್ತು ನೀಡುವ ಈ ಒಪ್ಪಂದ ಗಮನಾರ್ಹವಾದುದು ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದು, ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್ ಹೈಡ್ರೋಜನ್‌ಗೆ ಸಂಬಂಧಿಸಿದ ಆಸ್ಟ್ರೇಲಿಯದ ತಂತ್ರಜ್ಞಾನಗಳ ಬಳಕೆ ಕುರಿತು ಸ್ಮಾರ್ಟ್ ಎನರ್ಜಿ ಕೌನ್ಸಿಲ್ ಜತೆಗೆ ಕ್ರೆಡಲ್ ಸಮಾಲೋಚಿಸಲಿದೆ.

ಈ ಪಾಲುದಾರಿಕೆಯು ತಂತ್ರಜ್ಞಾನ ವಿನಿಮಯ ಸುಗಮಗೊಳಿಸಿ, ಶುದ್ಧ ಇಂಧನ ವಲಯಗಳಲ್ಲಿ ಪರಸ್ಪರ ಹಿತಾಸಕ್ತಿಯನ್ನು ಬೆಂಬಲಿಸುವ ದ್ವಿಪಕ್ಷೀಯ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಕ್ರಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಆಸ್ಟ್ರೇಲಿಯಾ ಸ್ಮಾರ್ಟ್ ಎನರ್ಜಿ ಕೌನ್ಸಿಲ್ ಸಿಇಒ ಜಾನ್ ಗ್ರಿಮ್ಸ್ ಒಪ್ಪಂದಕ್ಕೆ ಸಹಿ ಹಾಕಿದರು. ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಶಾಸಕರೂ ಆದ ಕ್ರೆಡಲ್ ಅಧ್ಯಕ್ಷ ಟಿ.ಡಿ. ರಾಜೇಗೌಡ ಇನ್ನಿತರರು ಇದ್ದರು.

ಶುದ್ಧ ಇಂಧನ ಮತ್ತು ಹಸಿರು ಹೈಡ್ರೋಜನ್ ಉಪಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ಕೆಲಸ ಮಾಡಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ಕಂಪನಿಗಳ ಜತೆಗೆ ಕರ್ನಾಟಕದ ಸಂಪರ್ಕ ಸುಲಭ, ಹೂಡಿಕೆ ಅವಕಾಶ ಹೆಚ್ಚಲಿವೆ. - ಕೆ.ಜೆ.ಜಾರ್ಜ್, ಇಂಧನ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net