

ಕೆ.ಆರ್.ನಗರ: ತಾಲೂಕಿನ ಸಾಲಿಗ್ರಾಮದಲ್ಲಿ ನಡೆದಿದ್ದ ಟೆಂಪೋ ಟ್ರಾವೆಲ್ ಮಾಲೀಕನ ಹತ್ಯೆ ಪ್ರಕರಣವನ್ನು ಮೂರು ದಿನಗಳಲ್ಲಿ ಭೇದಿಸಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೃತನ ಪತ್ನಿ ಹಾಗೂ ಆಕೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಪ್ರಿಯಕರನೆ ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್, ಡಿವೈಎಸ್‌ಪಿ ಡಾ.ಎ.ಆರ್.ಸುಮಿತ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಕೆ.ಆರ್.ನಗರ ಠಾಣೆ ಪಿಎಸ್‌ಐ ವಿ.ಚೇತನ್, ಸಾಲಿಗ್ರಾಮ ಪಿಎಸ್‌ಐ ಆರತಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಮಾದಪ್ಪ ಅವರ ತಂಡ ಆರೋಪಿಗಳ ಹೆಡೆಮುರಿ ಕಟ್ಟಿದೆ.
ಸಾಲಿಗ್ರಾಮದ ಕಾಲುವೆ ಬೀದಿ ನಿವಾಸಿ ಬಾಬು(37) ಹಾಗೂ ಮೃತ ಆನಂದ್‌ನ ಪತ್ನಿ ಶಾರದಾ(25) ಬಂಧಿತರು. ಮೊದಲು ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರು ಶುಕ್ರವಾರ ಪ್ರಿಯತಮೆಯನ್ನು ವಶಕ್ಕೆ ಪಡೆದು ಮಹತ್ವದ ವಿಚಾರಗಳನ್ನು ಕಲೆಹಾಕಿದರು.
ಕಾರಣ: ಆನಂದ್ ಜೊತೆಗಿದ್ದ ಗೆಳೆತನವನ್ನು ದುರುಪಯೋಗಪಡಿಸಿಕೊಂಡ ಆರೋಪಿ ಬಾಬು ಆತನ ಪತ್ನಿ ಜೊತೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಲುಗೆ ಬೆಳೆಸಿಕೊಂಡಿದ್ದನು. ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ತಮ್ಮ ಸಂಬಂಧ ಮುಂದೊಂದು ದಿನ ಪತಿಗೆ ತಿಳಿದರೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಶಾರದಾ ಪ್ರಿಯಕರನಿಗೆ ಹೇಳಿ ಪತಿಯನ್ನು ಹತ್ಯೆ ಮಾಡಿಸಿದ್ದಾಳೆ.
ಆರೋಪಿ ಬಾಬು ಕರೆ ಮೇರೆಗೆ ಆನಂದ್ ಎಪಿಎಂಸಿ ಉಪಮಾರುಕಟ್ಟೆ ಬಳಿಯ ದನದ ಕೊಟ್ಟಿಗೆಗೆ ತೆರಳಿ ಇಬ್ಬರು ಮದ್ಯಪಾನ ಮಾಡಿದ್ದಾರೆ. ಪೂರ್ವ ನಿಯೋಜನೆಯಂತೆ ಆರೋಪಿ ಬಾಬು ಕೊಡಲಿಯಿಂದ ಆನಂದ್ ತಲೆಗೆ ಹೊಡೆದು ಹತ್ಯೆ ಮಾಡಿ ಶವವನ್ನು ಭತ್ತದ ಹುಲ್ಲಿನಿಂದ ಸುತ್ತಿ ಮೃತನ ಸ್ಕೂಟರ್‌ನಲ್ಲೇ ಹೊರವಲಯದ ಕಾಲುವೆಯಮ್ಮನ ದೇಗುಲದ ಬಳಿ ತೆಗೆದುಕೊಂಡು ಹೋಗಿ ರಸ್ತೆ ಬದಿ ಎಸೆದು ಸ್ಕೂಟರ್ ಅನ್ನು ಅಲ್ಲಿಯೇ ನಿಲ್ಲಿಸಿ ಅಪಘಾತವೆಂದು ಬಿಂಬಿಸಲು ಕಸರತ್ತು ನಡೆಸಿದ್ದಾನೆ.
ಸಿನಿಮಾ ಪ್ರೇರಣೆ: ಹತ್ಯೆ ಮಾಡಿದ ನಂತರ ಆರೋಪಿ ಬಾಬು ಪ್ರಿಯತಮೆಯ ಮನೆಗೆ ತೆರಳಿ ವಿಷಯ ತಿಳಿಸಿ ಅಲ್ಲಿಯೇ ಸ್ನಾನ ಮಾಡಿದ್ದಾನೆ. ನಟ ವಿ.ರವಿಚಂದ್ರನ್ ನಟನೆಯ ದೃಶ್ಯಂ ಸಿನಿಮಾ ನೋಡಿ ಸಂಚು ರೂಪಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಿಯತಮೆಗೆ ಮೊಬೈಲ್ ಕೊಡಿಸಿದ್ದಲ್ಲದೇ ಆಕೆ ಮಹಿಳೆಯ ಹೆಸರಲ್ಲಿ ಈತನ ನಂಬರ್ ಸೇವ್ ಮಾಡಿಕೊಂಡು ಇಬ್ಬರು ನಿತ್ಯ ಚಾಟ್ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಸಾಲಿಗ್ರಾಮ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.