

ಬೆಂಗಳೂರು: ವೈದ್ಯರು, ಇಂಜಿನಿಯರುಗಳಂತಹ ವೃತ್ತಿಪರ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ವೇಗ ನೀಡುವ ಜತೆಗೆ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಗ್ರೂಪ್ ‘ಎ’ ಮತ್ತು ‘ಬಿ’ ಶ್ರೇಣಿ ಹುದ್ದೆಗಳ ನೇಮಕ ನಿಯಮ ಸಡಿಲಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಕೆಲವು ಇಲಾಖೆಗಳ ಗ್ರೂಪ್ ‘ಎ’ ಮತ್ತು ‘ಬಿ’ ಶ್ರೇಣಿ ಹುದ್ದೆಗಳ ಭರ್ತಿಗೆ ಇನ್ಮುಂದೆ ಸಂದರ್ಶನ ಇರುವುದಿಲ್ಲ. ಇದಕ್ಕೆ ಸಂಬಂಧಿಸಿದ ಕೆಪಿಎಸ್ಸಿ ನಿಯಮಾವಳಿಗೆ ತಿದ್ದುಪಡಿ ತರಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳಂತೆ ‘ಎ’ ಮತ್ತು ‘ಬಿ’ ಹುದ್ದೆಗಳಿಗೂ ಲಿಖಿತ ಪರೀಕ್ಷೆಯಿರಲಿದೆ. ಕೆಲವು ಇಲಾಖೆಗಳಿಗೆ ಮಾತ್ರ ಸೀಮಿತವಾಗಿ ಎ ಮತ್ತು ಬಿ ದರ್ಜೆ ಹುದ್ದೆಗಳ ಭರ್ತಿ ಕಾಲಕ್ಕೆ ಸಂದರ್ಶನ ಕೈಬಿಡಲಾಗಿದೆ. ವೈದ್ಯರು, ಇಂಜಿನಿಯರುಗಳಂತಹ ವೃತ್ತಿಪರ ಹುದ್ದೆಗಳಿಗೆ ಸಂದರ್ಶನ ಅನಗತ್ಯ. ಈ ಕಾರಣಕ್ಕೆ ಕೆಪಿಎಸ್ಸಿ ನೇಮಕ ನಿಯಮಾವಳಿ ತಿದ್ದುಪಡಿಗೆ ನಿರ್ಣಯಿಸಲಾಗಿದೆ ಎಂದು ಸಚಿವರು ಹೇಳಿದರು.
ವಿಳಂಬಕ್ಕೆ ಕಡಿವಾಣ: ಕೆಪಿಎಸ್ಸಿ ಮೂಲಕ ಹುದ್ದೆಗಳ ಭರ್ತಿ ಎಂದಾಕ್ಷಣ ವಿಳಂಬ, ವಿವಾದದಿಂದ ನನೆಗುದಿ ಹಾಗೂ ಸಂದರ್ಶನಗಳಲ್ಲಿ ಭ್ರಷ್ಟಾಚಾರದ ಆರೋಪ ಇತ್ತೀಚಿನ ವರ್ಷಗಳಲ್ಲಿ ಸರ್ವೆಸಾಮಾನ್ಯವಾಗಿದೆ. ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ನಡೆಸಲು ಒಂದುಒಂದೂವರೆ ವರ್ಷ ತೆಗೆದುಕೊಂಡ ಉದಾಹರಣೆಗಳಿವೆ.
ಅದರಲ್ಲೂ ವೈದ್ಯರು, ಇಂಜಿನಿಯರ್ಗಳ ಹುದ್ದೆ ಭರ್ತಿ ವಿಳಂಬ ರಾಜ್ಯ ಸರ್ಕಾರಕ್ಕೆ ತಲೆಬಿಸಿ ತಂದೊಡ್ಡಿದೆ. ತಾಲೂಕು ಕೇಂದ್ರ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನಿವಾರಣೆ ಹಾಗೂ ನೀರಾವರಿ, ಲೋಕೋಪಯೋಗಿ ಇನ್ನಿತರ ಇಲಾಖೆಗಳ ಯೋಜನೆ ಸಕಾಲಕ್ಕೆ ಅನುಷ್ಠಾನಕ್ಕೂ ಅಡಚಣೆಯಾಗಿದೆ.
ಆಯ್ದ ಇಲಾಖೆಗಳ ನೇಮಕ ನಿಯಮ ಸಡಿಲದಿಂದ ಅನಗತ್ಯ ವಿಳಂಬಕ್ಕೆ ಕಡಿವಾಣ ಬೀಳುವ ಆಶಾಭಾವನೆ ಹುಟ್ಟಿಸಿದೆ. ನೆರೆಯ ಆಂಧ್ರ ಸರ್ಕಾರ ಎಲ್ಲ ಇಲಾಖೆಗಳ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಸಂದರ್ಶನ ಕೈಬಿಟ್ಟಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಮುಖ್ಯವಾಗಿ ಸಂದರ್ಶನ ಪ್ರಕ್ರಿಯೆ ಬಳಿಕ ಉದ್ದೇಶಪೂರ್ವಕ ವ್ಯತ್ಯಾಸ, ಶಿಫಾರಸು, ಹಣದ ವ್ಯವಹಾರ ನಡೆದಿದ್ದಕ್ಕೆ ಸಾಕಷ್ಟು ಉದಾಹರಣೆಗಳಿದ್ದವು. ಸಂದರ್ಶನ ನಡೆಸಿದವರ ಮೇಲೆ ಎಷ್ಟು ಪ್ರಭಾವ ಬೀರುತ್ತೋ ಅಷ್ಟು ಸಂದರ್ಶನ ಅಂಕಗಳಲ್ಲಿ ವ್ಯತ್ಯಾಸವಾಗುತ್ತಿತ್ತು. ಇದರಿಂದ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರು ಕೆಲಸ ಗಿಟ್ಟಿಸಲು ವಿಫಲರಾಗುತ್ತಿದ್ದರು. ಜತೆಗೆ ಸರ್ಕಾರಿ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಉತ್ಸುಕರಾದವರು ಈ ವ್ಯವಸ್ಥೆಯಿಂದ ರೋಸಿಹೋಗಿ ದೂರ ಉಳಿಯುತ್ತಿದ್ದರು.