ಕೆಪಿಎಸ್ಸಿ ಪರೀಕ್ಷೆ; ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆಸಿದ್ದು ದುರ್ನಡತೆ

Mangala
Published on

ಬೆಂಗಳೂರು: ಕಲಬುರಗಿಯಲ್ಲಿ ಭಾನುವಾರ ನಡೆದ ಕೆಪಿಎಸ್ಸಿಯ ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆಯ ವೇಳೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆದಿದ್ದು ದುರ್ನಡತೆ ಪರಮಾವಧಿ ಎಂದು ಜಾತ್ಯತೀತ ಜನತಾದಳ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್, ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ, ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ. ಇದು ಸ್ತ್ರೀಯರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ. ನಾವು ಕರ್ನಾಟಕದಲ್ಲಿ ಇದ್ದೇವೆಯೋ? ಅಥವಾ ಇನ್ನೆಲ್ಲಾದರೂ ಇದ್ದೇವೆಯೋ? ಎಂದು ಕಿಡಿಕಾರಿದೆ.

ಇಂಡಿಯಾ ಎಂದು ಜಪಿಸುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭಾರತದ ಸಂಸ್ಕೃತಿಗೆ ಸಿಕ್ಕ ಗೌರವ ಇದು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಿರ್ನಾಮ ಮಾಡುವ ಕುಕೃತ್ಯ ಅವರಿಂದ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.

ಒಂದೆಡೆ ಗೃಹಲಕ್ಷ್ಮಿ ಎನ್ನುವ ರಾಜ್ಯ ಸರಕಾರ, ಇನ್ನೊಂದೆಡೆ ಅದೇ ಗೃಹಲಕ್ಷ್ಮಿಯರ ಸೌಭಾಗ್ಯ ಮತ್ತು ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ಕರ್ನಾಟಕ ಮಾದರಿ ಎಂದರೆ ತಾಯಂದಿರ ಮುತ್ತೈದೆತನಕ್ಕೇ ಕುತ್ತು ತರುವುದಾ? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇಷ್ಟಕ್ಕೂ ಪರೀಕ್ಷಾ ಸಿಬ್ಬಂದಿಗೆ ಮಹಿಳಾ ಅಭ್ಯರ್ಥಿಗಳ ತಾಳಿ, ಕಾಲುಂಗುರ ತೆಗೆಸುವಂತೆ ಆದೇಶ ಕೊಟ್ಟವರು ಯಾರು? ಕೆಪಿಎಸ್ಸಿ ಹಾಗೂ ರಾಜ್ಯ ಸರ್ಕಾರ ಕೂಡಲೇ ನೊಂದ ಮಹಿಳೆಯರ ಕ್ಷಮೆ ಯಾಚಿಸಬೇಕು ಹಾಗೂ ಇಂಥ ಆಘಾತಕಾರಿ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಮತ್ತೆಂದೂ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net