ಬಾಲಕಿಯರ ಕಾಲೇಜಿಗೆ ಕೆಪಿಎಸ್ ಭಾಗ್ಯ

education
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ವಿದ್ಯಾರ್ಥಿಗಳು ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಿದರು. ನಾಗರಾಜ್ ಗೌಡ, ಎಸ್.ಆರ್.ಮಂಜುನಾಥ್, ಲೋಕೇಶಪ್ಪ, ಓಬ್ಯಾನಾಯ್ಕ, ಮಹಾಲಿಂಗಪ್ಪ ಇತರರಿದ್ದರು.
Published on

ಶಿಕಾರಿಪುರ: ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಅಕ್ಕಪಕ್ಕದ ಕಾಲೇಜು, ಪ್ರೌಢಶಾಲೆಯನ್ನು ಸೇರಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಡಲಾಗುವುದು. ಈ ಮೂಲಕ ಶಾಲೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲೇ ಓದಿ ಶಿಕ್ಷಕರಾದವರು ಮಕ್ಕಳಿಗೆ ತಾವು ಕಲಿತ ವಿದ್ಯೆಯನ್ನು ಸಂಪೂರ್ಣವಾಗಿ ಧರೆಯೆರೆಯುತ್ತಾರೆ ಎಂದರು.

ಸರ್ಕಾರಿ ಶಾಲೆಯ ಬಹುತೇಕ ಶಿಕ್ಷಕರು ರೈತರ ಮಕ್ಕಳು. ಅವರಿಗೆ ಕಷ್ಟಗಳ ಅರಿವು ಇರುತ್ತದೆ. ನಾನು ಕೂಡ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದವನು. ಫೇಲಾದ ತಕ್ಷಣ ನಾವು ಹಿಂದೆ ಸರಿಯಬಾರದು. ಎಷ್ಟೋ ಮಕ್ಕಳು ಫೇಲಾದ ತಕ್ಷಣ ಶಾಲೆ ಬಿಟ್ಟು ಬಿಡುತ್ತಾರೆ. ಇದರಿಂದ ಅವರ ಶಿಕ್ಷಣ ಮೊಟಕಾಗುತ್ತದೆ. ಈ ಕಾರಣಕ್ಕೆ ಎಸ್‌ಎಸ್‌ಎಲ್‌ಸಿಯಲ್ಲಿ ಮೂರು ಪರೀಕ್ಷೆಗಳನ್ನು ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಮಣ್ಣಿನ ಆಸ್ತಿಯಾಗಬೇಕು ಎಂದು ತಿಳಿಸಿದರು.

ನಾವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆ ಯಾರಿಗೂ ಬೇಡ. ದೊಡ್ಡ ಜ್ಞಾನಿಗಳು, ವಿಜ್ಞಾನಿಗಳು, ನಾಯಕರು, ಸಾಹಿತಿಗಳು, ಸಾಧಕರು ಓದಿದ್ದು ಸರ್ಕಾರಿ ಶಾಲೆಗಳಲ್ಲಿಯೇ. ಯಾವ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ ಮಾತನಾಡಿ, ಶಿಕ್ಷಣ ಸಚಿವರು ಈ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿರುವ ಕಾರಣ ಈ ಶಾಲೆ ಸಮಗ್ರವಾಗಿ ಅಭಿವೃದ್ಧಿ ಆಗಲಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಓದಿದ ಶಿರಾಳಕೊಪ್ಪದ ಬಾಯ್ಸ್ ಜೂನಿಯರ್ ಕಾಲೇಜಿನ ಬಗ್ಗೆ ಸಚಿವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಆ ಶಾಲೆ ಸಮಗ್ರ ಅಭಿವೃದ್ಧಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಲಿದೆ. ಶಿಕಾರಿಪುರದ ಈ ಶಾಲೆಯನ್ನೂ ಸಚಿವರು ಕೆಪಿಎಸ್ ಮಾಡಲಿದ್ದಾರೆ ಎಂದರು.

ಸಚಿವ ಮಧು ಬಂಗಾರಪ್ಪ ಅವರನ್ನು ಸಾಂಪ್ರದಾಯಿಕ ಉಡುಪು ಧರಿಸಿದ್ದ ಮಕ್ಕಳು ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಡಿಡಿಪಿಐ ಎಸ್.ಆರ್.ಮಂಜುನಾಥ್, ಬಿಇಒ ಲೋಕೇಶಪ್ಪ, ಪ್ರಾಚಾರ್ಯ ಓಬ್ಯಾನಾಯ್ಕ, ಉಪ ಪ್ರಾಚಾರ್ಯ ನಾಗಾನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ ಸುಭಾಷ್, ಸದಸ್ಯರಾದ ಮಹಾಲಿಂಗಪ್ಪ, ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net