

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು(UVCE)ಅನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಕರ್ನಾಟಕ ಕಾಂಗ್ರೆಸ್ ಖಂಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ ಕನ್ನಡಿಗರ ಹೆಮ್ಮೆಯ ವಿಶ್ವೇಶ್ವರಯ್ಯ ಕಾಲೇಜು ವಿಶ್ವವಿದ್ಯಾಲಯವನ್ನು ಖಾಸಗೀಕರಣ ಮಾಡಲು ಹೊರಟಿರುವ ಬಿಜೆಪಿ ಸರರ್ಕಾರದ ಕ್ರಮ ಖಂಡನೀಯ. ಸರ್ ಎಂ ವಿಶ್ವೇಶ್ವರಯ್ಯನವರು ಕಟ್ಟಿದ ರಾಜ್ಯದ ಮೊದಲ ಎಂಜಿನಿಯರಿಂಗ್ ಕಾಲೇಜು ಇದಾಗಿದ್ದು ರಾಜ್ಯದ ಎಲ್ಲಾ ವರ್ಗದ ಮಕ್ಕಳಿಗೂ ಎಂಜಿನಿಯರಿಂಗ್ ಓದಲು ಇದು ಆಸರೆಯಾಗಿತ್ತು.
ಈಗ ವಿಶ್ವೇಶ್ವರಯ್ಯ ಕಾಲೇಜು ವಿಶ್ವವಿದ್ಯಾಲಯವನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡುವ ಮೂಲಕ ರಾಜ್ಯದಲ್ಲಿ ಉಳಿದಿರುವ ಕೆಲವೇ ಸರ್ಕಾರಿ ಕಾಲೇಜುಗಳನ್ನೂ ಸಹ ಖಾಸಗೀಕರಣ ಮಾಡಿ ಬಡವರ ಮಕ್ಕಳಿಗೆ ಎಂಜಿನಿಯರಿಂಗ್ ಓದು ಲಭ್ಯವಿಲ್ಲದಂತೆ ಮಾಡಲು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥನಾರಾಯಣ ಹೊರಟ್ಟಿದ್ದಾರೆ. ಇದು ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಯಾಗಿದೆ ಎಂದು ಟ್ವೀಟ್ ಮಾಡಿ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.