

ಬೆಂಗಳೂರು: ಮೂರು ವರ್ಷಗಳ ಬಳಿಕ ಎದುರಾಗುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ದೂರದೃಷ್ಟಿ ಆಲೋಚನೆಯಲ್ಲಿ ರಾಜ್ಯದಲ್ಲಿ ಹೊಸ ತಂಡ ಕಟ್ಟಲು ಎಐಸಿಸಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಕೆಪಿಸಿಸಿ ನಾಯಕತ್ವ ಯಾರಿಗೆ ಎಂಬ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳದೆ, ಒಮ್ಮತದ ಆಯ್ಕೆ ಮಾಡಬೇಕೆಂಬ ಹೈಕಮಾಂಡ್ ಆಶಯಕ್ಕೆ ವ್ಯತಿರಿಕ್ತ ಬೆಳವಣಿಗೆ ನಡೆದಿರುವ ಕಾರಣ ಸೂಕ್ತ ಆಯ್ಕೆಗೆ ಸಮಾಧಾನದ ಧೋರಣೆ ಅನುಸರಿಸಿದೆ.
2013ರಿಂದಲೂ ಸಿದ್ದರಾಮಯ್ಯ ಹಿಡಿತದಲ್ಲಿರುವ ಪಕ್ಷವನ್ನು ಅವರ ತೆಕ್ಕೆಯಿಂದ ಬಿಡಿಸಲು ಹಿರಿಯ ನಾಯಕರೆಲ್ಲ ಒಂದಾಗಿದ್ದರು, ಅವರೆಲ್ಲರೂ ಸೇರಿ ಡಿ.ಕೆ.ಶಿವಕುಮಾರ್ಗೆ ಪಟ್ಟ ಕಟ್ಟಲು ಅತ್ಯಾಸಕ್ತಿ ತೋರಿದ್ದಾರೆ. ಒಂದು ವೇಳೆ, ಹೈಕಮಾಂಡ್ ಬೇರೆ ಆಲೋಚನೆ ಮಾಡಿದರೂ ಸಿದ್ದರಾಮಯ್ಯ ಆಪ್ತರಿಗೆ ಪಕ್ಷದ ಜವಾಬ್ದಾರಿ ಸಿಗಬಾರದೆಂದು ಹಠಕ್ಕೆ ಬಿದ್ದಿದ್ದಾರೆ.
ಇತ್ತ ಎಂ.ಬಿ.ಪಾಟೀಲ್ಗೆ ಕೆಪಿಸಿಸಿ ಜವಾಬ್ದಾರಿ ಕೊಡಿಸಲು ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ. ಎಂಬಿಪಿಗೆ ಅವಕಾಶ ಸಿಕ್ಕರೆ ಮುಂದಿನ ಚುನಾವಣೆಯಲ್ಲಿ ಪಕ್ಷ ಕೈತಪ್ಪಲ್ಲ ಎಂಬುದು ಅವರ ಆಲೋಚನೆ. ಈಗಾಗಲೇ ಎರಡು ಬಾರಿ ಅಭಿಪ್ರಾಯ ಸಂಗ್ರಹಕ್ಕೆ ಎಐಸಿಸಿ ಪ್ರತಿನಿಧಿಯನ್ನು ಕಳಿಸಿಕೊಟ್ಟಿತ್ತು. ಸದ್ಯದ ಸನ್ನಿವೇಶದಲ್ಲಿ ರಾಜ್ಯ ನಾಯಕರಲ್ಲಿ ಒಮ್ಮತ ಇಲ್ಲ ಎಂಬುದು ಎರಡು ವರದಿಗಳಿಂದಲೂ ಸ್ಪಷ್ಟವಾಗಿದೆ. ಇನ್ನು ಹೈಕಮಾಂಡ್ ಸಂಪರ್ಕದಲ್ಲಿರುವ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಕರೆಸಿಕೊಂಡು ಅಭಿಪ್ರಾಯ ಕೇಳಿತ್ತು. ಒಂದೊಮ್ಮೆ ಡಿ.ಕೆ.ಶಿವಕುಮಾರ್ಗೆ ಅವಕಾಶ ಕೈತಪ್ಪಿದರೆ ರಾಮಲಿಂಗಾರೆಡ್ಡಿ ಸೂಕ್ತ ಎಂಬ ದನಿಯೊಂದು ಹೊಸದಾಗಿ ಪ್ರಸ್ತಾಪವಾಗಿದೆ. ಹಾಗೆಯೇ ನಾನೂ ಆಕಾಂಕ್ಷಿ ಎಂದು ಸತೀಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಈಶ್ವರ್ ಖಂಡ್ರೆ ಪರೋಕ್ಷವಾಗಿ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಬಿಕ್ಕಟ್ಟು ಬಗೆಹರಿಯುವ ವಾತಾವರಣ ಕಾಣಿಸುತ್ತಿಲ್ಲ. ಮುಂದಿನ ವಾರ ರಾಜ್ಯದ ಕೆಲವು ನಾಯಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಗಾದಿಯ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಸುತ್ತಲಿನ ಪಕ್ಷದ ನಾಯಕರ ಮನವೊಲಿಕೆಗೆ ಪ್ರಯತ್ನಿಸಿದ್ದು, ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. 2019ರ ಜೂನ್ 19ರಂದು ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಹೊರತು ಉಳಿದ ಪದಾಧಿಕಾರಿಗಳನ್ನು ಸೇವೆಯಿಂದ ಮುಕ್ತ ಮಾಡಲಾಗಿತ್ತು, ಉಪಚುನಾವಣೆ ಬಳಿಕ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಇಡೀ ಘಟಕಕ್ಕೆ ಗ್ರಹಣ ಬಡಿದಂತಾಗಿದೆ. ಇದನ್ನು ಮುಕ್ತ ಮಾಡುವ ಹೊಣೆ ಎಐಸಿಸಿ ಮೇಲಿದ್ದು, ಒಮ್ಮತದ ಆಯ್ಕೆಯಾಗದೆ ಹೋದರೆ ಭವಿಷ್ಯದಲ್ಲಿ ಆಗಬಹುದಾದ ಸಮಸ್ಯೆ ಅರಿತೇ ಎಚ್ಚರಿಕೆ ಹೆಜ್ಜೆ ಇಡಲಾರಂಭಿಸಿದೆ.
ಸಿದ್ದು ಭೇಟಿಯಾದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಭಾನುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ತಮಗೆ ಅವಕಾಶ ಕೊಟ್ಟರೆ ಎಲ್ಲ ರೀತಿಯ ಸಹಕಾರ ನೀಡುವ ಬಗ್ಗೆ ಸಿದ್ದರಾಮಯ್ಯಗೆ ಅವರು ಭರವಸೆ ನೀಡಿದರೆಂದು ತಿಳಿದುಬಂದಿದೆ. ಡಿಕೆಶಿ ಹೆಸರು ಅಂತಿಮವಾಗಿದ್ದು, ಈ ಕಾರಣಕ್ಕೆ ಮನವೊಲಿಸಲು ಅವರು ನಾಯಕರ ಮನೆಗಳಿಗೆ ಹೋಗುತ್ತಿದ್ದಾರೆಂಬ ಮಾತೂ ಪಕ್ಷದಲ್ಲಿದೆ. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಅಧಿಕಾರ ಇರಲಿ ಇಲ್ಲದೆ ಇರಲಿ ಸಿದ್ದರಾಮಯ್ಯ ನಮ್ಮ ನಾಯಕರು. ವಿರೋಧ ಮಾಡೋದು ನನ್ನ ರಕ್ತದಲ್ಲಿ ಇಲ್ಲ. ಸಿದ್ದರಾಮಯ್ಯ ನಮ್ಮ ಲೀಡರ್ ಅದಕ್ಕೆ ನಾನು ಅವರ ಜತೆ ಮಾತಾಡಿದ್ದೇನೆ. ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷದ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.
ನಾನು ಯಾವುದೇ ಹುದ್ದೆ ಕೇಳೊಲ್ಲ. ಕೇಳಿ ಪಡೆಯೋ ಕಾಲ ಹೋಗಿದೆ. ಯಾರು ಬೇಕಾದ್ರೂ ಯಾವ ಹುದ್ದೆ ಬೇಕಾದರೂ ಕೇಳಲಿ. ನಾನು ಯಾವುದೇ ಸ್ಥಾನಕ್ಕೆ ಕಾಂಪಿಟೇಟರ್ ಅಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಕೆಪಿಸಿಸಿ ಹುದ್ದೆ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅನೇಕರು ಕಣ್ಣಿಟ್ಟಿದ್ದು, ಶಾಸಕ ಸತೀಶ್ ಜಾರಕಿಹೊಳಿ ಅವರೂ ಆಕಾಂಕ್ಷಿಯಾಗಿದ್ದಾರೆ. ಈ ವಿಚಾರವಾಗಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಕೊಡಿ ಅಂತ ಕೇಳಿಲ್ಲ. ಹೈಕಮಾಂಡ್ ನೀಡಿದರೆ ನಿಭಾಯಿಸುತ್ತೇನೆ. ಒಂದೊಮ್ಮೆ ಬೇರೆ ಯಾರಿಗೇ ಕೊಟ್ಟರೂ ಅವರಿಗೆ ಸಹಕಾರ ನೀಡುತ್ತೇವೆ. ಒಟ್ಟಾಗಿ ಮತ್ತೆ ಪಕ್ಷ ಕಟ್ಟುತ್ತೇವೆ. ಮುಂದೆ ಬರಲಿರುವ ಚುನಾವಣೆ ಎದುರಿಸಲು ಸರ್ವ ಸಿದ್ಧತೆ ನಡೆಸುತ್ತೇವೆ ಎಂದರು. ಕೆಪಿಸಿಸಿಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಕುರಿತಂತೆ ದೆಹಲಿಯಲ್ಲಿ ವರಿಷ್ಠರು ಸಭೆ ಕರೆಯಲಿದ್ದಾರೆ. ಯಾರಿಗೆ ನೀಡಬೇಕು? ಯಾವ ಸಮುದಾಯದವರಿಗೆ ಕೊಡಬೇಕು? ಯಾವ ಪ್ರದೇಶದವರಿಗೆ ಎನ್ನುವ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದೆಹಲಿಗೆ ನಾನು ಸಾಮಾನ್ಯವಾಗಿ ಹೋಗುತ್ತೇನೆ. ಈ ವೇಳೆ ವರಿಷ್ಠರನ್ನು ಭೇಟಿಯಾಗಿಯೇ ಬರುತ್ತೇನೆ. ಹೀಗಾಗಿ ನಾನು ದೆಹಲಿಗೆ ಹೋಗಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.