

ಹೊಸನಗರ: ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ನಿವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ನೌಕರ ಭರತ್(48) ನಾಪತ್ತೆಯಾಗಿ 78 ದಿನಗಳ ಬಳಿಕ ಮಾಣಿ ಡ್ಯಾಮ್‌ನ ಹಿನ್ನೀರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
2024ರ ನ.3ರಂದು ಪತ್ನಿ ನಗರ ಠಾಣೆಯಲ್ಲಿ ಭರತ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಒಂದು ವಾರಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಮೃತನ ಕುಟುಂಬದವರು, ಸ್ಥಳೀಯರು, ಅಗ್ನಿಶಾಮಕ ದಳ, ಅರಣ್ಯ ಮತ್ತು ಪೊಲೀಸ್ ಇಲಾಖೆ ಕೂಡ ಕಾರ್ಯಾಚರಣೆ ನಡೆಸಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕೂಡ ಹಿನ್ನೀರಿನ 70 ಅಡಿ ಆಳದಲ್ಲಿ ಹುಡುಕಾಟ ನಡೆಸಿ, ಕೊನೆಗೆ ಶೋಧ ಕಾರ್ಯ ನಿಲ್ಲಿಸಿದ್ದರು.
ಹುಮ್ಮಡಗಲ್ಲು ಮಾಣಿ ಡ್ಯಾಮ್‌ನ ಹಿನ್ನೀರ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಇದ್ದ ಮೃತದೇಹವನ್ನ ಕಂಡ ಸ್ಥಳೀಯರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶವ ಭರತ್ ಅವರದೇ ಇರಬಹುದು ಎಂಬ ಸಂದೇಹದಿಂದ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರ ಪತ್ನಿಯು ಭರತ್ ಧರಿಸಿದ್ದ ಬಟ್ಟೆ ಆಧಾರದ ಮೇಲೆ ಶವ ತನ್ನ ಪತಿಯದೇ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ ಸಾವಿನ ಕುರಿತು ಅನುಮಾನವಿದ್ದು ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ.