

ನವದೆಹಲಿ: ಭಾರತದ 100ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ ಮೂವರು ಹೊಸ ಮುಖಗಳಿದ್ದಾರೆ. ಇವರಲ್ಲಿ 74 ವರ್ಷದ ಕೆ.ಪಿ.ರಾಮಸಾಮಿ ಒಬ್ಬರು. ಇವರು ಶ್ರೀಮಂತ ಪಟ್ಟಿಯಲ್ಲಿರುವ ರೈತನ ಮಗ, ಕಾಲೇಜ್ ಡ್ರಾಪ್ಔಟ್ ಎಂದರೆ ಅಚ್ಚರಿಯಾಗಬಹುದು. ಕೆಪಿಆರ್ ಜವಳಿ ಮಿಲ್ ಮತ್ತು ಸಕ್ಕರೆ ಕಾರ್ಖಾನೆಗಳ ಸಂಸ್ಥಾಪಕ ಅಧ್ಯಕ್ಷ. ಪ್ರಸ್ತುತ 19,133.7 ಕೋಟಿ ನಿವ್ವಳ ಆಸ್ತಿ ಒಡೆಯ.
ಕೆ.ಪಿ.ರಾಮಸಾಮಿ ಯಾರು?
ಮೂಲತಃ ತಮಿಳು ನಾಡಿನ ಕೆ.ಪಿ.ರಾಮಸಾಮಿ ಕೌಟುಂಬಿಕ ಕಾರಣಗಳಿಂದ ಉನ್ನತ ಶಿಕ್ಷಣ ಪಡೆಯಲಾಗಲಿಲ್ಲ. ಆದರೆ ತನ್ನ ಹಳ್ಳಿಗೆ ಮರಳಿ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿ ಕೆಪಿಆರ್ ಜವಳಿ ಮಿಲ್ ಮತ್ತು ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸುತ್ತಾರೆ. ಇವರು ಮೊದಲು ಮಾಡಿದ ಕೆಲಸವೇನೆಂದರೆ ತಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ, ಶಿಕ್ಷಣ ಕಲಿಯಲು ಆಸಕ್ತಿಯಿದ್ದ ಉದ್ಯೋಗಿಗಳಿಗೆ ಶಿಕ್ಷಣ ಕೊಡಿಸಿದರು. ಇದರ ಜತೆಗೆ ನುರಿತ ತರಬೇತಿಯನ್ನೂ ಒದಗಿಸಿದರು. ಇದರೊಂದಿಗೆ ಕಾರ್ಮಿಕರಲ್ಲಿ ಪರಿಣಿತಿ ಹೆಚ್ಚುವಂತೆ ಮಾಡಿದರು. ಕರೋನಾ ಸಂದರ್ಭದಲ್ಲಿಯೂ ಉದ್ಯೋಗಿಗಳನ್ನು ಕೈಬಿಡದೆ ಆತ್ಮವಿಶ್ವಾಸ ತುಂಬಿದರು. ಪ್ರಸ್ತುತ ಕಂಪನಿಯು ಸುಮಾರು 25ಸಾವಿರ ಉದ್ಯೋಗಿಗಳನ್ನು ಹೊಂದಿದೆ.
ಕೆಪಿಆರ್ ಭಾರತದ ಅತಿದೊಡ್ಡ ಗಾರ್ಮೆಂಟ್ ರಫ್ತು ಉದ್ಯಮ. ಬಟ್ಟೆಮಿಲ್ ಅನ್ನು 1984 ರಲ್ಲಿ ಸ್ಥಾಪಿಸಲಾಯಿತು. 2013 ರಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರು. ಫೋರ್ಬ್ಸ್ ಪ್ರಕಾರ, ಕೆಪಿಆರ್ ಮಿಲ್ಸ್ ವಾರ್ಷಿಕವಾಗಿ 128 ಮಿಲಿಯನ್ ಉಡುಪು ಉತ್ಪಾದಿಸುತ್ತದೆ. ಇವರ ಸಿದ್ಧುಡುಪುಗಳು ಎಚ್ಮತ್ತುಎಂ, ಮಾರ್ಕ್ಸ್ ಮತ್ತು ಸ್ಪೆನ್ಸರ್, ವಾಲ್‌ಮಾರ್ಟ್‌ನಂತಹ ಜಾಗತಿಕ ಚಿಲ್ಲರೆ ಮಾರಾಟ ಸಂಸ್ಥೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.
ಇತರ ಹೊಸಬರು
ಫೋರ್ಬ್ಸ್ ಪಟ್ಟಿಯಲ್ಲಿರುವ ಇತರ ಹೊಸ ಹೆಸರುಗಳಲ್ಲಿ ಏಷ್ಯನ್ ಪೇಂಟ್ಸ್ ನ ಡ್ಯಾನಿ ಕುಟುಂಬ ನಿವ್ವಳ 67,841.77 ಕೋಟಿ ರೂ.ಗಳೊಂದಿಗೆ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಅಧ್ಯಕ್ಷೆ ರೇಣುಕಾ ಜಗ್ತಿಯಾನಿ ಮತ್ತೊಂದು ಹೊಸ ಸೇರ್ಪಡೆ. ಇವರ ಆಸ್ತಿ ನಿವ್ವಳ ಮೌಲ್ಯ 39,931.20 ಕೋಟಿ ರೂ.ಇದೆ.
ಅಗ್ರ 3 ಶ್ರೀಮಂತ ಭಾರತೀಯರು
ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ $ 92 ಶತಕೋಟಿ ನಿವ್ವಳ ಆಸ್ತಿ ಮೌಲ್ಯದೊಂದಿಗೆ ಮೊದಲ ಸ್ಥಾನ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ $ 68 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನ, ಮತ್ತು ಎಚ್ಸಿಎಲ್ ಸಂಸ್ಥಾಪಕ ಶಿವ ನಾಡರ್ $29.3 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.