

ಶೃಂಗೇರಿ: ಭಯೋತ್ಪಾದಕರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು ನಮ್ಮ ದೇಶದಲ್ಲಿ ಇದ್ದು ಪಾಕಿಸ್ತಾನ ಪರ ಸಂಸ್ಕೃತಿಯನ್ನು ಬೆಳೆಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಅವರು ಕನ್ನಡಭವನದಲ್ಲಿ ತಾಲೂಕು ಬಿಜೆಪಿ ಮಂಡಲ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಗೆ ಎಸ್.ಸಿ ಹಾಗೂ ಎಸ್ಟಿ ವರ್ಗದವರಿಗೆ ಮೀಸಲಿರಿಸಿದ್ದ 11,500 ಕೋಟಿ ರೂ. ಅಭಿವೃದ್ಧಿ ಅನುದಾನ ಬಳಸಿಕೊಂಡಿದೆ. ಸುಳ್ಳು ಭರವಸೆ ನೀಡುವುದು ಕಾಂಗ್ರೆಸ್ ಜಾಯಮಾನವಾಗಿದ್ದು ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ರೈತರ ಪರ ಎಂದು ಹೇಳುವ ಸಿದ್ದರಾಮಯ್ಯ ಅವರ ಸರ್ಕಾರ ಹಿಂದೆ ಬಿಜೆಪಿ ಸರ್ಕಾರ ನೀಡುತ್ತಿದ್ದ 4 ಸಾವಿರ ರೂ. ಸ್ಥಗಿತಗೊಳಿಸಿದೆ. ವಿದ್ಯುತ್ ಹಾಗೂ ಮದ್ಯದ ದರ ಹೆಚ್ಚಿಸಿ ರಾಜ್ಯ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದರು.
ದೇಶದ ಆರ್ಥಿಕ ಮೌಲ್ಯ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದ್ದು ಕೇಂದ್ರ ಸರ್ಕಾರವು ಜನಸಾಮಾನ್ಯರಿಗಾಗಿ ಹಲವು ಯೋಜನೆಗಳನ್ನು ತಂದು ಅರ್ಥಿಕ ಸಬಲತೆ ನೀಡುವಲ್ಲಿ ಯಶಸ್ಸು ಕಂಡಿದೆ. ಮೋದಿ ದೇಶದ ಜನರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಉಜ್ವಲಾ ಯೋಜನೆ, ಸ್ವಚ್ಛ ಭಾರತ್, ಜಲಜೀವನ್‌ಮಿಷನ್, ಸ್ವಯಂ ಉದ್ಯೋಗಕ್ಕೆ ಅರ್ಥಿಕ ಸಹಕಾರ ನೀಡುತ್ತಾ ನುಡಿದಂತೆ ನಡೆದುಕೊಂಡಿದೆ ಎಂದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಜನಸಂಘದ ಬೇರು ಗಟ್ಟಿಯಾಗಿದೆ. ಮೋದಿ ಅವರು ಮಾಡಿದ ಜನಪರ ಯೋಜನೆಗಳನ್ನು ಹೊಗಳುತ್ತಾ ಮನೆಯಲ್ಲಿ ಕೂರಬಾರದು. ಕಾರ್ಯಕರ್ತರು ಸಂಘಟಿತರಾಗಿ ಚುನಾವಣೆಯಲ್ಲಿ ಹೋರಾಟ ನಡೆಸಬೇಕಿದೆ. ಪಕ್ಷ ಕಟ್ಟುವಲ್ಲಿ ಹಲವರು ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ನಾವು ಅಧಿಕಾರಯುತವಾಗಿ ಮತಯಾಚಿಸಬಹುದು ಎಂದರು.
ಸಭೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್, ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್, ಜಿಪಂ ಮಾಜಿ ಉಪಾಧ್ಯಕ್ಷ ಎನ್.ಎಸ್.ರಾಮಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಬಿಜೆಪಿ ಮುಖಂಡ ವಿಕಾಸ್ ಪುತ್ತೂರು, ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್,ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನೂತನ್‌ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಇದ್ದರು.