ಬೆಂಗಳೂರು: ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಈ ಮಧ್ಯೆ ಯಾರು ಈ ವರ್ಷದ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂಬ ಗೊಂದಲ, ಪ್ರಶ್ನೆಗಳಿಗೆ ಇದೀಗ ಕೊನೆಗೂ ಉತ್ತರ ಲಭಿಸಿದೆ.
ಈ ವರ್ಷದ ಅದ್ಧೂರಿ ಮೈಸೂರು ದಸರಾ ಹಬ್ಬವನ್ನು ಉದ್ಘಾಟಿಸಲು ಕೊಪ್ಪಳದ ಗವಿ ಸಿದ್ದೇಶ್ವರ ಮಠದ ಸ್ವಾಮೀಜಿಯವರು ಆಯ್ಕೆಯಾಗಿದ್ದಾರೆ. ಈ ಕುರಿತಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಇಂದಿನ ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಾಡಿನ ಬರ ಪರಿಸ್ಥಿತಿ, ಕಸ್ತೂರಿ ರಂಗನ್ ವರದಿ ವಿವಾದ ಮತ್ತು ರಾಜಕೀಯ ಪಕ್ಷಗಳ ವಿರೋಧ, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳನ್ನು ಚರ್ಚಿಸಿದ ಮುಖ್ಯಮಂತ್ರಿಗಳು, ಪ್ರಮುಖ ವಿಷಯಗಳ ಬಳಿಕ ಈ ಬಾರಿಯ ಮೈಸೂರು ದಸರಾ ಉದ್ಘಾಟಕರ ಹೆಸರನ್ನು ಬಹಿರಂಗಪಡಿಸಿದರು.
ಕಳೆದ ವರ್ಷ ಅಂದರೆ 2025ರ ದಸರಾ ಮಹೋತ್ಸವವನ್ನು ಭಾನು ಮುಷ್ತಾಕ್ ಅವರು ಉದ್ಘಾಟಿಸಿದರು. ರಾಜ್ಯ ಸರ್ಕಾರ ಮುಷ್ತಾಕ್ ಅವರ ಹೆಸರನ್ನು ಘೋಷಿಸಿದ ದಿನದಿಂದಲೂ ಉದ್ಘಾಟನೆಯವರೆಗೂ ಈ ವಿಚಾರ ಭಾರಿ ವಿವಾದಕ್ಕೆ ಗುರಿಯಾಗಿತ್ತು. ಸರ್ಕಾರದ ಆಯ್ಕೆಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿ, ತೀವ್ರ ಅಸಮಾಧಾನ ಹೊರಹಾಕಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.