

ಕೊಪ್ಪಳ: ಮುಂಬರುವ ವಿಧಾನಸಭೆ ಚುನಾವಣೆಗೆ ಒಂದೆಡೆ ರಾಜಕೀಯ ಪಕ್ಷಗಳು ಭರ್ಜರಿ ತಾಲೀಮು ನಡೆಸಿದ್ದು, ಅಧಿಕಾರಿ ವರ್ಗವೂ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ. ಶಾಂತಿ ಹಾಗೂ ಸುಗಮ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ ಈ ಹಿಂದಿನ ಚುನಾವಣೆಗಳಲ್ಲಿ ಅಕ್ರಮವೆಸಗಿದವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈಗಿನಿಂದಲೇ ಅಂಥವರಿಗೆ ಕಡಿವಾಣ ಹಾಕಲು ಮುಂದಾಗಿದೆ.
ಮತದಾರ ರಾಜ್ಯ ರಾಜಕೀಯದ ಮುಂದಿನ ಐದು ವರ್ಷಗಳ ಭವಿಷ್ಯಕ್ಕೆ ಮತ ನೀಡಲು ಇನ್ನೇನು ಒಂದೆರೆಡು ತಿಂಗಳು ಬಾಕಿ ಇದೆ. ಪೂರಕವೆಂಬಂತೆ ಚುನಾವಣಾ ಆಯೋಗ ಅಧಿಕಾರಿಗಳಿಗೆ ತರಬೇತಿ, ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆ ರಿಪೇರಿ, ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮುಂತಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿದ್ದು, 1322 ಮತಗಟ್ಟೆಗಳಿವೆ. 5,57,308 ಪುರುಷ, 5,60,894 ಮಹಿಳೆ, 49 ಇತರೆ ಸೇರಿ 11,18,251 ಮತದಾರರಿದ್ದಾರೆ. ಈ ಹಿಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನಡೆದ ಅಹಿತಕರ ಘಟನೆಗಳು, ಗಲಾಟೆ, ಚುನಾವಣೆ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ, ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳು ಮುಂತಾದ ವಿವರಗಳನ್ನು ಕಲೆ ಹಾಕಲಾಗುತ್ತಿದೆ.
ಪ್ರತಿ ಚುನಾವಣೆಯಲ್ಲೂ ನೀತಿ ಸಂಹಿತೆ ಜಾರಿಗೊಳಿಸುವ ಆಯೋಗ ದೂರುಗಳನ್ನು ದಾಖಲಿಸಿಕೊಳ್ಳುತ್ತದೆ. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಈ ಬಗ್ಗೆ ನಂತರದ ದಿನಗಳಲ್ಲಿ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗದ ಕಾರಣ ಚುನಾವಣಾ ಅಕ್ರಮಗಳು ಗಂಭೀರವಾದವೆಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡುತ್ತಿಲ್ಲ. ರಾಜಕೀಯ ಪಕ್ಷಗಳು ಅವುಗಳನ್ನು ತೆರೆ ಹಿಂದೆ ಸರಿಸುವ ಕಾರಣ ಅಕ್ರಮದಲ್ಲಿ ಭಾಗಿಯಾದವರಿಗೂ ತಮ್ಮ ತಪ್ಪಿನ ಅರಿವಾಗುತ್ತಿಲ್ಲ. ಎಷ್ಟೆಲ್ಲ ಜಾಗೃತಿ ನಡುವೆ, ಪ್ರಚಾರದಲ್ಲಿ ಮಕ್ಕಳ ಬಳಕೆ, ಮತದಾರರಿಗೆ ಆಮಿಷ ಒಡ್ಡುವಿಕೆ, ಮತಗಟ್ಟೆಯಲ್ಲಿ ಅಸಭ್ಯ ವರ್ತನೆ, ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ, ಬೆದರಿಕೆ ಹಾಕುವಿಕೆ, ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸುವಂಥ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರುಕಳಿಸುತ್ತಿವೆ.
ಹೀಗಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಈ ಅಕ್ರಮಗಳು ಮರುಕಳಿಸದಂತೆ ಎಚ್ಚರಿಕೆವಹಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ. ಚುನಾವಣೆಗೆ ಸಿಬ್ಬಂದಿ ಸಜ್ಜುಗೊಳಿಸುವ ಜತೆಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಸಂಬಂಧ ಜಿಲ್ಲಾದ್ಯಂತ ಅರಿವು, ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮತದಾನ ಜಾಗೃತಿ ಜತೆಗೆ ಚುನಾವಣಾ ಅಕ್ರಮಗಳ ಕುರಿತು ಯುವಕರು, ಸಾರ್ವಜನಿಕರಿಗೆ ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಇದರೊಂದಿಗೆ ಹಿಂದಿನ ಪ್ರಕರಣಗಳಲ್ಲಿ ಭಾಗಿಯಾದವರ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ತಪ್ಪೆಸಗದಂತೆ ಪೊಲೀಸ್ ಇಲಾಖೆ ತಾಕೀತು
ಕಳೆದ 2013, 2018ರ ವಿಧಾನಸಭಾ ಹಾಗೂ 2014, 2019ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಒಟ್ಟು 168 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪೈಕಿ 68 ಪ್ರಕರಣಗಳಲ್ಲಿ ವಿಚಾರಣೆ ಮುಗಿದಿದ್ದು, ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಬಾಕಿ ಪ್ರಕರಣಗಳ ವಿಚಾರಣೆ ಮುಂದುವರೆದಿದೆ. ಅಕ್ರಮದಲ್ಲಿ ಭಾಗಿಯಾದವರಿಗೆ ಈ ಬಾರಿಯ ಚುನಾವಣೆಯಲ್ಲಿ ಮತ್ತದೆ ತಪ್ಪೆಸಗದಂತೆ ಪೊಲೀಸ್ ಇಲಾಖೆ ತಾಕೀತು ಮಾಡುತ್ತಿದೆ. ಗಲಾಟೆ, ಅಶಾಂತಿ ಸೃಷ್ಟಿಸುವವರು, ಅಕ್ರಮ ಎಸಗುವ ಸಾಧ್ಯತೆ ಇರುವವರಿಂದ ಈಗಿನಿಂದಲೇ ತಾಲೂಕು ದಂಡಾಧಿಕಾರಿ ಮೂಲಕ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಲು ಯೋಜಿಸಿದೆ. ಗಲಾಟೆ ಮಾಡುವವರನ್ನು ಮೊದಲೇ ಕಟ್ಟಿಹಾಕುವ ತಂತ್ರ ಅನುಸರಿಸುತ್ತಿದೆ.
ಚುನಾವಣೆಯನ್ನು ಶಾಂತಿ ಹಾಗೂ ಸುಸೂತ್ರವಾಗಿ ನಡೆಸಬೇಕಿದೆ. ಈ ಹಿಂದಿನ ಎಲೆಕ್ಷನ್‌ಗಳಲ್ಲಿ ಅಕ್ರಮ ಎಸಗಿದ ಬಗ್ಗೆ 168 ಕೇಸ್ ದಾಖಲಾಗಿದ್ದು, 68ರಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಬಾಕಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆರೋಪಿತರಿಂದ ಈಗಿನಿಂದಲೇ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತಿದೆ. ಚುನಾವಣಾ ಅಕ್ರಮಗಳ ಸಂಬಂಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.| ಅರುಣಾಂಗ್ಷು ಗಿರಿ, ಎಸ್ಪಿ, ಕೊಪ್ಪಳ