

ಜಿಲ್ಲಾದ್ಯಂತ ಮಾಜಿ ಸಿಎಂ 108ನೇ ಜನ್ಮ ದಿನಾಚರಣೆ
ಕೊಪ್ಪಳ: ಹಿಂದುಳಿದ ವರ್ಗಗಳ ಧೀಮಂತ ನಾಯಕ ಡಿ.ದೇವರಾಜ ಅರಸು ಪರಿವರ್ತನೆಯ ಹರಿಕಾರರಾಗಿದ್ದರು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಬಣ್ಣಿಸಿದರು.
ಇದನ್ನೂ ಓದಿರಿ: ಡಿ.ದೇವರಾಜ ಅರಸು ಬಡತನ ನಿರ್ಮೂಲನೆ ಮೊದಲ ಆದ್ಯತೆ
ನಗರದ ಸಾಹಿತ್ಯ ಭವನದಲ್ಲಿ ಹಿಂದುಳಿದ ವರ್ಗಗಳ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಮಾಜಿ ಸಿಎಂ ದಿ. ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸರ್ವರಿಗೂ ಸಮಬಾಳು, ಸಮಪಾಲು ತತ್ವ ಪಾಲನೆಯಡಿ ಹತ್ತಾರು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಸಾಮಾನ್ಯರು ಸಹ ಶಾಸಕ, ಸಂಸದರಾಗುವಂತೆ ಅವಕಾಶ ನೀಡಿದ ಮಹತ್ವದ ಕಾರ್ಯ ಮಾಡಿದ್ದಾರೆ ಎಂದರು.
12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರ ಚಿಂತನೆಗಳನ್ನು ಮೈಗೂಡಿಸಿಕೊಂಡು, ಅವಕಾಶ ವಂಚಿತರಿಗೆ ಸಮಾನ ಅವಕಾಶ ನೀಡಿ ಮುಖ್ಯವಾಹಿನಿಗೆ ಬರುವಂತೆ ಮಾಡಿದರು.
ಸಮಾಜದಲ್ಲಿ ಹಲವಾರು ಸುಧಾರಣೆ ತಂದರು. ನಮ್ಮ ದೇಶ ಹಾಗೂ ರಾಜ್ಯಕ್ಕೆ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ ಎಂದು ಹೇಳಿದರು.
ಕಾರಟಗಿಯ ಸಿಎಂಎನ್ ಪದವಿಪೂರ್ವ ಕಾಲೇಜಿನ ಅಧ್ಯಾಪಕ ಡಾ.ಹನುಮಂತಪ್ಪ ಚಂದಲಾಪುರ ಅವರು ಡಿ.ದೇವರಾಜ ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿ,
ಹಿಂದುಳಿದ ವರ್ಗ ಸೇರಿ ವಿವಿಧ ವರ್ಗಗಳ ಜನತೆಗೆ ನಾಯಕರಂತಿದ್ದ ಡಿ.ದೇವರಾಜ ಅರಸು ಅವರು ಕೇವಲ ವ್ಯಕ್ತಿಯಾಗಿರದೇ, ದೊಡ್ಡ ಶಕ್ತಿಯಾಗಿದ್ದರೆಂದು ತಿಳಿಸಿದರು.
ನಗರಸಭೆ ಸದಸ್ಯ ವಿರುಪಾಕ್ಷಪ್ಪ ಮೊರನಾಳ, ಎಸಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ವಿಠಲ್ ಚೌಗಲಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಜಯಕುಮಾರ ಗೌಡ ಪಾಟೀಲ,
ಪ್ರಮುಖರಾದ ಮಂಜುನಾಥ ಬೇಳೂರು, ಬಸವರಾಜ, ಈರಣ್ಣ ಕುಂಬಾರ ಇತರರಿದ್ದರು.