

ಕೊಪ್ಪಳ: ಜನ ಸಾಮಾನ್ಯರಲ್ಲಿ ಸಾಂಸತಿಕ ಪ್ರಜ್ಞೆ ಮೂಡಿಸುವುದು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಶೈಕ್ಷಣಿಕ ಪ್ರಗತಿಯ ಗುರಿ ಉದ್ಧೇಶಗಳೊಂದಿಗೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ 2024&-25ನೇ ಸಾಲಿಗೆ ನಾಟಕ ಮತ್ತು ದೃಶ್ಯ ಕಲಾ ಕೋರ್ಸುಗಳನ್ನು ಆರಂಭಿಸಲಾಗುವುದು ಎಂದು ಕುಲಪತಿ ಪ್ರೊ. ಬಿ.ಕೆ.ರವಿ ಹೇಳಿದರು.
ಕರ್ನಾಟಕ ಲಲಿತ ಕಲಾ ಅಕಾಡಮಿಯ ಅಧ್ಯಕ್ಷರಾದ ಪ.ಸ.ಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದರು.
ಕೊಪ್ಪಳ ಕಲಾವಿದರ ನೆಲೆಬೀಡಾಗಿದ್ದು ಕಿನ್ನಾಳ ಚಿತ್ರಕಲೆಗೆ ಪ್ರಸಿದ್ಧಿ ಪಡೆದಿದೆ ಇಂತಹ ದೇಶಿಯ ಕಲೆಗಳ ಉಳಿವಿಗಾಗಿ ಮತ್ತು ಅಭಿವೃದ್ಧಿಗೆ ಸಾಂಸ್ಕೃತಿಕ ಇಲಾಖೆಗಳು ಶ್ರಮಿಸುತ್ತಿರುವ ಹೊತ್ತಿನಲ್ಲಿ ಉತ್ತರ ಕರ್ನಾಟಕದ ರಂಗಭೂಮಿ ಇಂದು ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಆದ್ದರಿಂದ ಶಿಕ್ಷಣದಲ್ಲಿ ಈ ಕೋರ್ಸ್ ಗಳನ್ನು ಆರಂಭಿಸುವ ಮೂಲಕ ಲಲಿತ ಕಲೆಗಳ ಪ್ರಾಮುಖ್ಯತೆಯ ಅರಿವು ಮೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್ ಮಾತನಾಡಿ ಕೊಪ್ಪಳ ಜಿಲ್ಲೆಯ ಕಲೆಗಳಿಗೆ ಮತ್ತು ರಂಗಭೂಮಿ ಬೆಳಣಿಗೆಗೆ ನಾಟಕ ಮತ್ತು ದೃಶ್ಯ ಕಲಾ ಕೋರ್ಸ್ ಗಳ ಆರಂಭಿಸುವ ನಿರ್ಧಾರ ತುಂಬಾ ಔಚಿತ್ಯಪೂರ್ಣವಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಪ.ಸ.ಕುಮಾರ ಅವರಿಗೆ ಸನ್ಮಾನ ಮಾಡಲಾಯಿತು. ಕುಲಸಚಿವ ಪ್ರೊ.ಕೆ.ವಿ.ಪ್ರಸಾದ್, ನಿರ್ದೇಶಕ ಪ್ರಕಾಶ ಯಳವಟ್ಟಿ ಹಾಗೂ ಪ್ರವಿಣ್ ಪಾಟೀಲ್ ಇದ್ದರು.