

ಕೊಪ್ಪಳ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಬುಧವಾರ-ಗುರುವಾರ ವರುಣ ಆರ್ಭಟಿಸಿದ್ದು, ಸಾಕಷ್ಟು ನಷ್ಟ ಉಂಟು ಮಾಡಿದ್ದಾನೆ. ಹಳ್ಳಗಳು ತುಂಬಿ ಹರಿದರೆ, ಕೆಲವೆಡೆ ಶಾಲೆ, ಮನೆಗಳಿಗೆ ನೀರು ನುಗ್ಗಿದೆ.
ವಾರದಿಂದ ಮಳೆಯಾಗುತ್ತಿದ್ದರೂ ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ಬುಧವಾರ ರಾತ್ರಿ ಆರಂಭವಾದ ಮಳೆ ಕೆಲ ಗಂಟೆಗಳವರೆಗೆ ನಿರಂತರವಾಗಿ ಸುರಿದಿದೆ. ಹೊಲದಲ್ಲಿನ ಕೃಷಿಹೊಂಡಗಳು ತುಂಬಿವೆ. ಹಳ್ಳಗಳು ಭರ್ತಿಯಾಗಿದ್ದು, ರಸ್ತೆಗೆ ನೀರು ಹರಿಯುತ್ತಿದೆ. ಒಣ ಬೇಸಾಯ ಆಧಾರಿತ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಶುರುವಾದರೆ, ಅಲ್ಲಲ್ಲಿ ನೀರಾವರಿ ಸೌಲಭ್ಯ ಇರುವವರು ಹತ್ತಿ ಬೆಳೆದಿದ್ದಾರೆ. ಅಧಿಕ ಮಳೆಯಾಗಿ ಹೊಲದಲ್ಲಿ ನೀರು ನಿಂತ ಪರಿಣಾಮ ಕೊಪ್ಪಳ ತಾಲೂಕಿನ ಚಿಕ್ಕ ಸಿಂದೋಗಿ ಗ್ರಾಮದಲ್ಲಿ ಹತ್ತಿ ನೀರಿನಲ್ಲಿ ಮುಳುಗುವಂತಾಗಿದೆ. ಹಣವಾಳ, ಹಿರೇ ಸಿಂದೋಗಿ, ಕಾಟ್ರಳ್ಳಿ, ಕೋಳೂರು ಸೇರಿ ಇತರ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕಾಟ್ರಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು, ಆವರಣ ಭರ್ತಿಯಾಗಿದೆ. ಶಾಲಾ ಕೊಠಡಿಗಳು ಸೋರುತ್ತಿವೆ. ಹೀಗಾಗಿ ಒಂದೇ ಕೊಠಡಿಯಲ್ಲಿ ಕುಳಿತು ಮಕ್ಕಳು ಪಾಠ ಕೇಳುವಂತಾಗಿದೆ.
ಕೆರೆ-ಕಟ್ಟೆಗಳಿಗೆ ಹರಿದು ಬಂದ ನೀರು
ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕೆರೆ, ಹಳ್ಳ, ಕೃಷಿಹೊಂಡ ಹಾಗೂ ಚೆಕ್‌ಡ್ಯಾಮ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೂ ಮಳೆ ಸುರಿದಿದೆ. ಮಸಾರಿ ಭಾಗದಲ್ಲಿ ಸೂರ್ಯಕಾಂತಿ, ಬೀಜೋತ್ಪಾದನೆ ಬೆಳೆಗಳಾದ ಕಲ್ಲಂಗಡಿ, ಹತ್ತಿ ಬೀಜ ನಾಟಿ ಮಾಡಲಾಗಿದ್ದು, ಜಮೀನಲ್ಲಿ ಮಳೆ ನೀರು ಸಂಗ್ರಹಗೊಂಡು ಅರ್ಧದಷ್ಟು ಹಾನಿಯಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕಲಭಾವಿ, ಲಕಮನಗುಳೆ ಸೇರಿ ಕೆಲ ಕಡೆ ಕೆರೆ, ಹಳ್ಳ ತುಂಬಿದ್ದು, ಅಂತರ್ಜಲಮಟ್ಟ ಹೆಚ್ಚುವ ನಿರೀಕ್ಷೆ ಇದೆ. ಇನ್ನೂ ಮುಂಗಾರು ಬಿತ್ತನೆಗಾಗಿ ಹೊಲಗಳನ್ನು ಸಿದ್ಧಗೊಳಿಸಿರುವ ರೈತರಿಗೆ ಅನುಕೂಲವಾಗಿದೆ.
ಹುಣಸಿಹಾಳದಲ್ಲಿ ಮನೆಗೆ ನುಗ್ಗಿದ ನೀರು: ಹುಣಸಿಹಾಳ ಜನತಾ ಕಾಲನಿಯಲ್ಲಿರುವ ಮನೆಗಳಿಗೆ ನಾಲೆ ತುಂಬಿ ನೀರು ನುಗ್ಗಿದ ಪರಿಣಾಮ ದವಸ, ಧಾನ್ಯ ಹಾಳಾಗಿದೆ. ಇದರಿಂದ ರಾತ್ರಿಯಿಡೀ ಜನಜೀವನ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ತಹಸೀಲ್ದಾರ್ ಶ್ರೀಶೈಲ ತಳವಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.