ಸೋಮೇಶ್ವರ ದೇವಸ್ಥಾನದಲ್ಲಿ ಕೊಂಡೋತ್ಸವ

27 SARAG 3
ಸರಗೂರು ತಾಲೂಕಿನ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಸರಗೂರು : ಪಟ್ಟಣದ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಗುರುವಾರ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನವನ್ನು ಮಾವಿನ ತೋರಣ, ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಗ್ರಾಮದ ಬೀದಿಗಳಲ್ಲೂ ವಿದ್ಯುತ್ ದೀಪಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಬೆಳಗಿನ ಜಾವದಿಂದಲೇ ಗಣಪತಿ ಹೋಮ, ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ಬಿಲ್ವಾರ್ಚನೆ, ಶಿವ ಸಹಸ್ರನಾಮ ಸೇರಿ ವಿವಿಧ ಪೂಜಾ ಕೈಂಕರ್ಯ ನೆರವೇರಿದವು.

ಬೆಳಗ್ಗೆ ಕಪಿಲಾ ನದಿಗೆ ತೆರಳಿ ಗಂಗೆ ಪೂಜೆ ನಡೆಸಿ ಉಮಾ ಮಹೇಶ್ವರ ಉತ್ಸವಮೂರ್ತಿಯನ್ನು, ವೀರಗಾಸೆ ಮಂಗಳವಾದ್ಯ ಸಮೇತ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇವಾಲಯಕ್ಕೆ ತರಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಕೆಂಡದ ಮೇಲೆ ನಡೆದು ಹರಕೆ ತೀರಿಸಿದರು. ನಂತರ ಶಿವನಿಗೆ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು. ಕೊಂಡೋತ್ಸವದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗ್ರಾಮಗಳಿಂದ ಭಕ್ತರು ಆಗಮಿಸಿ ಶಿವನ ದರ್ಶನ ಪಡೆದು ಪುನೀತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net