ನಟಿ ಅಂಜಲಿ ಜತೆಗಿನ ಸಂಬಂಧ ಕುರಿತು ಕಡೆಗೂ ಮೌನಮುರಿದ ನಿರ್ಮಾಪಕ ಕೋನ ವೆಂಕಟ್​ | Actress Anjali

ವಿಜಯವಾಣಿ - 2025-03-10T152350.581
Published on

Actress Anjali: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಟಿ ಅಂಜಲಿ, ಸ್ಟಾರ್​ ನಟರ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ನಟಿಸಿರುವ ಅಂಜಲಿ, ಪವರ್​ಸ್ಟಾರ್​ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಜೋಡಿಯಾಗಿ 'ರಣವಿಕ್ರಮ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಿಂದ ಆದಷ್ಟು ದೂರ ಉಳಿಯುವ ನಟಿ ಸದ್ಯ ವದಂತಿಗಳಿಂದ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತಾರೆ.

ಎರಡು ದಶಕಗಳಿಂದ ಚಿತ್ರರಂಗದಲ್ಲಿ ಬರಹಗಾರ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಕೋನ ವೆಂಕಟ್​, ಹಲವಾರು ಚಿತ್ರಗಳಲ್ಲಿ ಅಂಜಲಿ ಜತೆಗೆ ಕೆಲಸ ಮಾಡಿದ್ದಾರೆ. ಆಗಾಗ್ಗೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನೋಡಿದ ನೆಟ್ಟಿಗರು, ನಿರ್ಮಾಕರು ಹಾಗೂ ನಟಿ ಅಂಜಲಿ ಮಧ್ಯೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳನ್ನು ಹಬ್ಬಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಪ್ರತಿಕ್ರಿಯಿಸಿದ ವೆಂಕಟ್​, ಇದೀಗ ಕಡೆಗೂ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡ ವೆಂಕಟ್​, ಅಂಜಲಿ ಬಗ್ಗೆ ನನಗೆ ತುಂಬ ಸಾಫ್ಟ್​ ಕಾರ್ನರ್​ ಇದೆ ಎಂದಿದ್ದಾರೆ.

"ಆಕೆಯನ್ನು ನಾನು ನನ್ನ ಸಹೋದರಿ, ಮಗಳು, ಸ್ನೇಹಿತೆ ಎಂದು ಕರೆಯುತ್ತೇನೆ. ಅದೇ ಭಾವನೆಯಲ್ಲಿ ನೋಡುತ್ತೇನೆ. ನೀವು ಏನು ಬೇಕಾದರೂ ಅಂದುಕೊಳ್ಳಿ. ಅಸಲಿಗೆ ಅಂಜಲಿ ವೈಯಕ್ತಿಕ ಜೀವನದ ಬಗ್ಗೆ ಕೆಲವರಿಗೆ ತಿಳಿದಿಲ್ಲ. ಆಕೆಯ ಬಾಲ್ಯ ಸಂತೋಷವಾಗಿರಲಿಲ್ಲ. ತಮ್ಮ ಹೆತ್ತವರೊಂದಿಗೆ ಆಕೆ ಬೆಳೆಯಲಿಲ್ಲ. ಬದಲಿಗೆ ತಮ್ಮ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದು ಬಂದವರು" ಎಂದು ಹೇಳಿದರು.

"ನಾನು ಮೊದಲು ಅಂಜಲಿಯನ್ನು 'ಗೀತಾಂಜಲಿ' ಚಿತ್ರೀಕರಣದ ಸಮಯದಲ್ಲಿ ಭೇಟಿಯಾಗಿದ್ದು. ಅದೇ ಸಮಯದಲ್ಲಿ, ಆಕೆ ಚೆನ್ನೈನಲ್ಲಿ ಹಲವು ಸಮಸ್ಯೆಗಳಿಂದ ಪರದಾಡುತ್ತಿದ್ದರು. ನಟಿಯ ಚಿಕ್ಕಮ್ಮ ಅಂಜಲಿಯ ಆಸ್ತಿಯನ್ನು ವಶಪಡಿಸಿಕೊಂಡಿದ್ದರು. ಅಂತಹ ಸಮಯದಲ್ಲಿ, ನಿಸ್ವಾರ್ಥವಾಗಿ ತನ್ನೊಂದಿಗೆ ನಿಲ್ಲುವ ಸ್ನೇಹಿತನ ಅವಶ್ಯಕತೆ ಅಂಜಲಿಗೆ ಬೇಕಿತ್ತು. ಆಕೆಯ ಅಣ್ಣನ ಸ್ಥಾನದಲ್ಲಿ ನಿಂತು ನಾನು ಅವರ ಜತೆಗಿದ್ದೆ" ಎಂದರು.

ಮೊದಲ ಕಾರು BMW

"ಅಂಜಲಿ ನನ್ನನ್ನು ಸ್ನೇಹಿತ, ಸಹೋದರ, ತಂದೆ, ಶಿಕ್ಷಕನಂತೆ ಭಾವಿಸಿದ್ದಾಳೆ. ತನ್ನ ಸಂಪಾದನೆಯಲ್ಲಿ ಆಕೆ ಖರೀದಿಸಿದ ಮೊದಲ BMW ಕಾರಿನ ಕೀ ನಾನೇ ಅವಳಿಗೆ ಹಸ್ತಾಂತರಿಸಿದ್ದೆ. ನಾನು ಖರೀದಿಸಿದ ಕಾರಿನ ಕೀ ಅನ್ನು ನಿಮ್ಮ ಕೈಯಿಂದಲೇ ಪಡೆಬೇಕು ಎಂಬುದು ನನ್ನ ಆಸೆ ಎಂದು ಅಂಜಲಿ ನನಗೆ ಹೇಳಿದಳು. ಇದಕ್ಕೆ ಓಕೆ ಎಂದ ನಾನು, ನನ್ನೀ ಕೈಗಳಿಂದಲೇ ಆಕೆಗೆ ಹೊಸ ಕಾರಿನ ಕೀಯನ್ನು ಹಸ್ತಾಂತರಿಸಿ, ಶುಭಕೋರಿದ್ದೆ. ನಮ್ಮಿಬ್ಬರ ಸಂಬಂಧಕ್ಕೆ ನೀವು ಯಾವ ಹೆಸರನ್ನು ಇಟ್ಟರೂ ನನಗೆ ಚಿಂತೆಯಿಲ್ಲ, ಬೇಸರವಿಲ್ಲ" ಎಂದು ಕೋನ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net