

ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದಲ್ಲಿ ಶನಿವಾರ ಯುವಕರ ಗುಂಪಿನಿಂದ ಹಲ್ಲೆಗೊಳಗಾಗಿ, ಮಾರನೆ ದಿನ ಬೆಂಗಳೂರಿನ ರೈಲ್ವೆ ಟ್ರಾೃಕ್‌ನಲ್ಲಿ ಶವವಾಗಿ ಪತ್ತೆಯಾದ ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಮೃತನ ಪಾಲಕರು, ಸಂಬಂಧಿಕರು ಹಾಗೂ ಸ್ಥಳೀಯರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಲಿಂಗಣಾಪುರದ ನಿವಾಸಿ ಮಹದೇವಪ್ಪ ಅವರ ಪುತ್ರ ನಂದೀಶ್(28) ಮೃತ. ಡಿ.6 ರಂದು ರಾತ್ರಿ ಮೈಸೂರಿನಿಂದ ಕೊಳ್ಳೇಗಾಲದ ಬಸ್ ನಿಲ್ದಾಣಕ್ಕೆ ಬಂದಿಳಿದ ನಂದೀಶ್ ಮೇಲೆ ನಾಲ್ವರು ಯುವಕರ ತಂಡ ಹಲ್ಲೆ ನಡೆಸಿದೆ. ಭಾನುವಾರ ಬೆಳಗ್ಗೆ ನಂದೀಶ್ ಮೃತದೇಹ ಬೆಂಗಳೂರಿನ ರೈಲ್ವೆ ಟ್ರ್ಯಾಕ್‌ನಲ್ಲಿ ಪತ್ತೆಯಾಗಿರುವ ಮಾಹಿತಿ ತಿಳಿದುಬಂತು. ಈ ಹಿನ್ನೆಲೆಯಲ್ಲಿ ಯುವಕನ ಸಾವಿನ ಬಗ್ಗೆ ಅನುಮಾನವಿದೆ. ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಮೇಲೆ ಎಸೆದಿರಬಹುದು ಎಂದು ದೂರಿದರು.
ಘಟನೆ ವಿವರ : ಶನಿವಾರ ರಾತ್ರಿ ಕೌಶಿಕ್ ಹಾಗೂ ಮತ್ತೊಬ್ಬ ಯುವಕ ನಂದೀಶ್ ಮನೆಗೆ ಬಂದು ನಂದೀಶ್ ಮೊಬೈಲ್ ಸಿಕ್ಕಿರುವುದಾಗಿ ಅವರ ತಾಯಿಗೆ ತಿಳಿಸಿದ್ದಾರೆ. ಕೂಡಲೇ ರಾತ್ರಿ 12ಗಂಟೆಯಲ್ಲಿ ಮೃತನ ಸಂಬಂಧಿಕರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಪೊಲೀಸ್ ಸಿಬ್ಬಂದಿ ದೂರು ಪಡೆದುಕೊಳ್ಳದೆ ಸಂಬಂಧಿಕರ ಮನೆಯಲ್ಲಿ ಹುಡುಕುವಂತೆ ತಿಳಿಸಿ ಕಳುಹಿಸಿದ್ದಾರೆ. ನಂತರ ಭಾನುವಾರ ಬೆಂಗಳೂರಿನ ರೈಲ್ವೆ ಟ್ರ್ಯಾಕ್‌ನಲ್ಲ್ಲಿ ಅಪರಿಚಿತ ಮೃತ ದೇಹ ಸಿಕ್ಕಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಅದು ನಂದೀಶ್ ಮೃತದೇಹವೆಂದು ಗೊತ್ತಾಗಿದೆ. ಈ ವಿಚಾರವನ್ನು ಪೊಲೀಸರು ಮೃತನ ಕುಟುಂಬದವರಿಗೆ ತಿಳಿಸಿದ್ದಾರೆ. ಇದರಿಂದ ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಬೆಳಗ್ಗೆ ಪ್ರತಿಭಟನೆಗೆ ಮುಂದಾದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ ಪತ್ತೆಗೆ ಕ್ರಮವಹಿಸಿಲ್ಲ. ಈ ಬಗ್ಗೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ ಯುವಕನಿಗೆ ಪಟ್ಟಣ ಪೋಲೀಸರು ಧಮ್ಕಿ ಹಾಕಿದ್ದಾರೆ. ರೌಡಿಶೀಟರ್ ಪಟ್ಟಿಗೆ ಸೇರಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದು, ಆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಂದೀಶ್ ತಾಯಿ ದಾಕ್ಷಾಯಣಿ ಮಾತನಾಡಿ, ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಆತ ತುಂಬ ಒಳ್ಳೆಯವನು. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಮಗನನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಪಡೆದುಕೊಂಡಿಲ್ಲ. ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಜಿ.ಯು.ಸೋಮೇಗೌಡ ಮಾತನಾಡಿ, ನಂದೀಶ್ ಸಾವಿನ ಪ್ರಕರಣದ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಪಾರದರ್ಶಕತೆಯಿಂದ ನಡೆಯಲಿದೆ. ತಪ್ಪಿತಸ್ಥರ ಮೇಲೆ ಕ್ರಮವಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ದೂರು ನೀಡಲು ಹೋದವನ ಮೇಲೆ ರೌಡಿಶೀಟರ್ ಹಾಕುವ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.