

ಕೊಳ್ಳೇಗಾಲ: ಅಪ್ರಾಪ್ತೆಯನ್ನು ಅಪಹರಿಸಿ ಮಂಗಳವಾರ ಕಾರಿನಲ್ಲಿ ಕರೆದೊಯ್ಯುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ತಡೆದ ಮಧುವನಹಳ್ಳಿ ಗ್ರಾಮಸ್ಥರು, ಆರೋಪಿಗಳಿಗೆ ಚೆನ್ನಾಗಿ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಕೇರಳ ಮೂಲದ ಇಸ್ಮಾಯಿಲ್, ಅಯೂಬ್, ಉಮರ್, ಅಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದವರು. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಇವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಾಲ್ವರು ಕೇರಳದಿಂದ ತಮಿಳುನಾಡು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಕಾಲೇಜು ರಸ್ತೆಯಲ್ಲಿ ಹೋಗುತ್ತಿದ್ದಾಗ ಭಿಕ್ಷಾಟನೆ ಮಾಡುತ್ತಿದ್ದ ಬಾಲಕಿ ಕಾರಿಗೆ ಕೈ ತೋರಿಸಿ, ಊಟಕ್ಕಾಗಿ ಹಣ ಕೇಳಿದ್ದಾಳೆ. ಈ ವೇಳೆ ಆರೋಪಿಗಳು, ‘ನಿನಗೆ ಊಟ ಕೊಡಿಸುತ್ತೇವೆ’ ಎಂದು ಹೇಳಿ ಆಕೆಯನ್ನು ಕಾರಿನೊಳಗೆ ಬಲವಂತವಾಗಿ ಹತ್ತಿಸಿಕೊಂಡಿದ್ದಾರೆ. ಬಳಿಕ ವೇಗವಾಗಿ ಸಾಗುತ್ತಿದ್ದಾಗ ಮಧುವನಹಳ್ಳಿ ಗ್ರಾಮದ ಬಳಿ ಕಾರು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗ್ರಾಮಸ್ಥರು ಕಾರನ್ನು ಸುತ್ತುವರಿದು ಪರಿಶೀಲಿಸಿದಾಗ ಬಾಲಕಿ ಚೀರಾಡುವುದು ಬೆಳಕಿಗೆ ಬಂದಿದೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು, ಬಾಲಕಿಯನ್ನು ಅಪಹರಿಸಿ ಕರೆದೊಯ್ಯುತ್ತಿರುವ ಶಂಕೆಯಿಂದ ನಾಲ್ವರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಬಾಲಕಿಯನ್ನು ಕಾರಿನಿಂದ ಕೆಳಗಿಳಿಸಿ ರಕ್ಷಣೆ ಮಾಡಿದ್ದಾರೆ. ಮಾಹಿತಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಡಿವೈಎಸ್ಪಿ ಜಿ.ಯು.ಸೋಮೇಗೌಡ, ಸಿಪಿಐ ಕೃಷ್ಣಪ್ಪ ಹಾಗೂ ಪಿಎಸ್‌ಐ ಗಣೇಶ್ ವಿಚಾರಣೆಗೆ ಒಳಪಡಿಸಿದ್ದಾರೆ.
ಪಿಎಸ್‌ಐ ಉಮಾವತಿ ಹಾಗೂ ಮಹಿಳಾ ಸಿಬ್ಬಂದಿ ಸಂತ್ರಸ್ತ ಬಾಲಕಿಯಿಂದ ಘಟನೆ ಕುರಿತು ಮಾಹಿತಿ ಪಡೆದರು. ಬಾಲಕಿ ನಂಜನಗೂಡು ಮೂಲದ ಗ್ರಾಮದವೊಂದರ ನಿವಾಸಿ ಎಂದು ತಿಳಿದುಬಂದಿದೆ.