ನಗುತ್ತಿರುವ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಕೊಲೆಯಾದ ಲಿವ್-ಇನ್ ಸಂಗಾತಿ

crime new
Published on

ಕೊಲ್ಕತ್ತಾ: ಹೃದಯ ವಿದ್ರಾವಕ ಪ್ರಕರಣವೊಂದು ಕೊಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ 30 ವರ್ಷದ ಮಹಿಳೆಯೊಬ್ಬಳು ತನ್ನ ಲಿವ್-ಇನ್ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕೃತ್ಯ ಎಸಗಿದ ಬಳಿಕ ಮಹಿಳೆಯೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಮಹಿಳೆಯ ಲಿವ್ ಇನ್ ಪಾರ್ಟನರ್ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಸದ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ವರದಿಗಳ ಪ್ರಕಾರ, ಡುಮ್ಡಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಅಪರಾಧ ನಡೆದ ಸ್ವಲ್ಪ ಸಮಯದ ನಂತರ ಮಹಿಳೆಯೇ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು 30 ವರ್ಷದ ಸಂಹತಿ ಪಾಲ್ ಎಂದು ಗುರುತಿಸಲಾಗಿದೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ತನ್ನ ಮೊದಲ ಪತಿಯಿಂದ ವಿಚ್ಛೇದನದ ನಂತರ, ಅವರು 30 ವರ್ಷದ ಸಾರ್ಥಕ್ ದಾಸ್ ಅವರೊಂದಿಗೆ ಡುಮ್ಡಮ್ ಪ್ರದೇಶದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಆರೋಪಿ ಮಹಿಳೆ ವೃತ್ತಿಯಲ್ಲಿ ಮೇಕಪ್ ಕಲಾವಿದೆ.

ಘಟನೆಗೆ ಮೊದಲು ಫೋಟೋ ಶೇರ್

ವರದಿಯ ಪ್ರಕಾರ, ಘಟನೆ ನಡೆಯುವ ಸ್ವಲ್ಪ ಸಮಯದ ಮೊದಲು, ಛಾಯಾಗ್ರಾಹಕ ಸಾರ್ಥಕ್ ದಾಸ್ ಅವರು ಆರೋಪಿ ಮಹಿಳೆ ಮತ್ತು ಆಕೆಯ ಮಗನೊಂದಿಗೆ ಕಾಣಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೂವರೂ ನಗುತ್ತಿದ್ದಾರೆ. ಫೋಟೋದ ಶೀರ್ಷಿಕೆಯಲ್ಲಿ ಸಾರ್ಥಕ್ ಫ್ಯಾಮಿಲಿ ಎಂದು ಬರೆದಿದ್ದರು.

ಪೊಲೀಸರ ಪ್ರಕಾರ, ವಿಚ್ಛೇದನದ ನಂತರ ಸಾರ್ಥಕ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ಸಂಹತಿ ಕುಟುಂಬವು ಅವಳ ಹೊಸ ಸಂಬಂಧಕ್ಕೆ ಒಪ್ಪಿಗೆ ಕೊಟ್ಟಿತ್ತು. ಇಬ್ಬರೂ ಎಂಗೇಜ್ ಆದರು. ಈ ಘಟನೆ ಏಕೆ ನಡೆಯಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಸಾರ್ಥಕ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಸಂಹತಿ ಪಾಲ್ ಮತ್ತು ಆಕೆಯ ಮಗನೊಂದಿಗಿನ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಕಳೆದ ಕೆಲ ದಿನಗಳಿಂದ ಸಾರ್ಥಕ್ ಮತ್ತು ಸಂಹತಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂಬ ಮಾಹಿತಿ ಲಭಿಸಿದೆ. ವಿಚಾರಣೆ ವೇಳೆ ಸಂಹತಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೊಲೆ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net