

ಕೋಲ್ಕತ್ತ: ಜಗತ್ತಿನಲ್ಲೀಗ ಕರೊನಾ ವೈರಸ್ ನಿವಾರಿಸುವ ಲಸಿಕೆಯನ್ನು ತಯಾರಿಸುವ ಕಾರ್ಯ ಭಾರಿ ವೇಗದಿಂದ ನಡೆಯುತ್ತಿರುವುದು ಸರಿಯಷ್ಟೇ. ಕರೊನಾವನ್ನು ಈ ವಿಶ್ವದಿಂದಲೇ ದೂರ ಓಡಿಸಬೇಕೆಂಬ ಉದ್ದೇಶಕ್ಕೆ ನೂರಾರು ರಾಷ್ಟ್ರಗಲು ಜತೆಗೂಡಿ ಕಾರ್ಯ ನಿರ್ವಹಿಸುತ್ತಿವೆ.
ಅಂತೆಯೇ, ಕರೊನಾವನ್ನು ದೂರವಿಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗಿರಬೇಕು ಎಂಬುದು ಕೂಡ ಅಷ್ಟೇ ನಿಜ. ಈ ಕಾರ್ಯವನ್ನೇ ಲಸಿಕೆಯಿಂದ ಮಾಡಲು ಅಂದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಶೋಧನೆಗಳು ನಡೆಯುತ್ತಿವೆ.
ಇಂಥದ್ದೇ ಕಾರ್ಯವನ್ನು ನಾವು ತಯಾರಿಸಿರುವ ಸಿಹಿ ತಿಂಡಿ ಕೂಡ ಮಾಡಲಿದೆ ಎಂದು ಕೋಲ್ಕತ್ತದ ಬಲರಾಮ್ ಮಲ್ಲಿಕ್ ಮತ್ತು ರಾಧಾರಮಣ ಮಲ್ಲಿಕ್ ಸಿಹಿ ತಿಂಡಿಗಳ ಅಂಗಡಿ ಹೇಳಿಕೊಂಡಿದೆ. ಇದಕ್ಕೆ 'ಇಮ್ಯೂನಿಟಿ ಸಂದೇಶ್' ಎಂದು ಹೆಸರಿಟ್ಟಿದೆ.
'ಸಂದೇಶ್' ಬೆಂಗಾಳ ಪ್ರಸಿದ್ಧ ಸಿಹಿ ತಿನಿಸಾಗಿದೆ. ಇದರಲ್ಲಿ ಆರ್ಯುವೇದ ಮೂಲಿಕೆಗಳನ್ನು ಬಳಸಲಾಗಿರುವುದು ವಿಶೇಷವಾಗಿದೆ. ಇನ್ನು ಗಮನಾರ್ಹ ಅಂಶವೆಂದರೆ, ಇದರ ತಯಾರಿಕೆಗೆ ಸಕ್ಕರೆ ಅಥವಾ ಬೆಲ್ಲ ಬಳಸಿಲ್ಲ. ಇದನ್ನು ಬಳಸಿದರೆ ಆಯುರ್ವೇದ ಸಾಮಗ್ರಿಗಳ ಶಕ್ತಿ ಕುಂದುತ್ತದೆ. ಹೀಗಾಗಿ ಜೇನನ್ನು ಸೇರಿಸಲಾಗಿದೆ.
ತುಳಸಿ, ಅರಿಶಿಣ, ಸಣ್ಣ ಏಲಕ್ಕಿ, ಜ್ಯೇಷ್ಠ ಮಧು, ಜಾಯಫಲ, ಶುಂಠಿ, ಕರಿಮೆಣಸು, ಕರಿ ಎಳ್ಳು, ಪೀಪಲ್ ಮೊದಲಾದ ಆಯುರ್ವೇದ ಸಾಮಗ್ರಿಗಳನ್ನು ಬಳಸಲಾಗಿದೆ. ಈ ಸಾಮಗ್ರಿಗಳನ್ನು ಬಳಸುವ ಮುನ್ನ ಹಲವು ಆಯುರ್ವೇದ ಪಂಡಿತರನ್ನು ಸಂಪರ್ಕಿಸಿ ಸಲಹೆ ಪಡೆಯಲಾಗಿದೆ ಎಂದು ಇದರ ತಯಾರಕರು ಹೇಳಿಕೊಂಡಿದ್ದಾರೆ.
ಆಯುರ್ವೇದ ಸಾಮಗ್ರಿಗಳೆಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿವೆ ಎಂದು ತಜ್ಞರು ಕೂಡ ಹೇಳಿದ್ದಾರೆ. ಇದಕ್ಕೆ ಜನರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.