

ಕೊಲ್ಕತಾ: ಬಾಂಗ್ಲಾದೇಶಿ ರೋಗಿಗಳಿಗೆ ಅನಿರ್ದಿಷ್ಟಾವಧಿಯವರೆಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸುವುದಾಗಿ ಮಾಣಿಕ್ತಾಲಾ ಪ್ರದೇಶದ ಆಸ್ಪತ್ರೆಯೊಂದು ಘೋಷಿಸಿದೆ. ಇನ್ನು ಮುಂದೆ ಬಾಂಗ್ಲಾದೇಶಿ ರೋಗಿಗಳಿಗೆ(Bangladeshi Patients) ಚಿಕಿತ್ಸೆ ನೀಡುವುದಿಲ್ಲ ಎಂದು ಜೆಎನ್ ರೇ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧದ ಪ್ರತಿಭಟನೆಯ ಉಲ್ಲೇಖಿಸಿ ಹಾಗೂ ಬಾಂಗ್ಲಾದೇಶದ ನಾಗರಿಕರು ಭಾರತೀಯ ಧ್ವಜಕ್ಕೆ ಅಗೌರವ ತೋರಿದ ಘಟನೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಿರುವುದನ್ನು ಕಂಡು ನಾವು ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನಿಲ್ಲಿಸಲು ನಿರ್ಧರಿಸಿದ್ದೇವೆ. ಅವರ ಸ್ವಾತಂತ್ರ್ಯದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಆದರೆ ಇದರ ಹೊರತಾಗಿಯೂ ಅಲ್ಲಿ ನಾವು ಭಾರತ ವಿರೋಧಿ ಭಾವನೆಗಳನ್ನು ನೋಡುತ್ತಿದ್ದೇವೆ. ನಮ್ಮನ್ನು ಬೆಂಬಲಿಸಿ ಮತ್ತು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಚಿತ್ತಗಾಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಹಿಂಸಾಚಾರದ ನಡುವೆ ಹರೀಶ್ ಚಂದ್ರ ಮುನ್ಸೆಫ್ ಲೇನ್ ಪ್ರದೇಶದಲ್ಲಿರುವ ಮೂರು ಹಿಂದೂ ದೇವಾಲಯಗಳನ್ನು ಶುಕ್ರವಾರ(ನವೆಂಬರ್ 29) ಧ್ವಂಸಗೊಳಿಸಲಾಗಿದೆ. ನವೆಂಬರ್ 25 ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಯಿತು. ಅಂದಿನಿಂದ ಹಿಂಸಾಚಾರ ಮತ್ತು ಅಶಾಂತಿ ಪ್ರಾರಂಭವಾಗಿದೆ. ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ರಕ್ಷಣೆಗಾಗಿ ಕೆಲಸ ಮಾಡಲು ಪ್ರಸಿದ್ಧರಾಗಿದ್ದರು. ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದ್ದು ಜಾಮೀನು ನಿರಾಕರಿಸಲಾಗಿದೆ. ಆತನ ಬಂಧನದ ನಂತರ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಪ್ರಾರಂಭವಾದವು.(ಏಜೆನ್ಸೀಸ್)