'ತಪ್ಪು ಸಂತ್ರಸ್ತೆಯದ್ದೇ ಎನ್ನುತ್ತೀರಾ?' ಕೋಲ್ಕತ್ತಾ ಟ್ರೈನಿ ವೈದ್ಯೆ ಹತ್ಯೆ ಕುರಿತು ನಟಿ ಸೆಲಿನಾ ಆಸಕ್ತಿಕರ ಪೋಸ್ಟ್​!

SELINA
Published on

ನವದೆಹಲಿ: ಶಾಲಾ ದಿನಗಳಲ್ಲಿ ಹುಡುಗರು ಹಲವು ಬಾರಿ ನನ್ನನ್ನು ಚುಡಾಯಿಸಿದ್ದು, ಕಿರುಕುಳಕ್ಕೆ ಒಳಗಾಗಿದ್ದೇನೆ. ಶಿಕ್ಷಕರಿಗೆ ಹೇಳಿದರೆ ನನ್ನನ್ನೇ ದೂರುತ್ತಿದ್ದರು ಎಂದು ತನ್ನ ಬಾಲ್ಯದ ನೋವನ್ನು ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಹಂಚಿಕೊಂಡಿದ್ದಾರೆ.

ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆಲಿನಾ ತನ್ನ ಮನದಲ್ಲಿನ ವೇದನೆಯನ್ನು ಬಹಿರಂಗಪಡಿಸಿದ್ದಾರೆ. ಹೆಣ್ಣಿನ ರಕ್ಷಣೆಗೆ ಮತ್ತು ನಮ್ಮ ಹಕ್ಕಿಗಾಗಿ ಧೈರ್ಯದಿಂದ ಎದ್ದು ನಿಲ್ಲುವ ಸಮಯ ಬಂದಿದೆ ಎಂದು ಕರೆ ನೀಡಿದ್ದಾರೆ.

ಅವರು ಪೋಸ್ಟ್ ಗೆ ಆರನೇ ತರಗತಿಯಲ್ಲಿ ಓದುತ್ತಿರುವ ಫೋಟೋವನ್ನು ಲಗತ್ತಿಸಿದ್ದು, ಆ ವಯಸ್ಸಿನಲ್ಲಿ ತನಗೆ ಎದುರಾದ ಕಹಿ ಅನುಭವಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಹುಡುಗರು ನನ್ನ ಮೇಲೆ ಕಲ್ಲು ಎಸೆಯುತ್ತಿದ್ದರು. ಒಂದು ದಿನ ನಾನು ನನ್ನ ಶಿಕ್ಷಕರಿಗೆ ಹೇಳಿದೆ. ಅದಕ್ಕೆ ಅವರು 'ನೀನು ಪಾಶ್ಚಾತ್ಯ ಶೈಲಿಯ ಬಟ್ಟೆ ಹಾಕಿಕೊಂಡು ಬರಬೇಡ, ಬಿಗಿ ಉಡುಗೆ ಬಿಟ್ಟು ಸಡಿಲವಾದ ಬಟ್ಟೆಗಳನ್ನು ಧರಿಸಿ ಬರಬೇಕು. ನಿನ್ನ ತಲೆಗೆ ಎಣ್ಣೆ ಹಚ್ಚಿಕೊಂಡು , ಎರಡು ಜಡೆ ಹಾಕಿಕೊಂಡು ಬರಬೇಕು ಎಂದು ನನಗೇ ಸಲಹೆ ನೀಡಿದರು ಎಂದು ದೂರಿದ್ದಾರೆ.

ಒಂದು ಮುಂಜಾನೆ ಶಾಲೆಯ ರಿಕ್ಷಾಕ್ಕಾಗಿ ಕಾಯುತ್ತಿದ್ದೆ. ಒಬ್ಬ ವ್ಯಕ್ತಿ ನನ್ನ ಮುಂದೆ ಬಂದು ತನ್ನ ಖಾಸಗಿ ಅಂಗಗಳನ್ನು ತೋರಿಸಿದ. ಈ ಬಗ್ಗೆ ಯೋಚಿಸುವಾಗ, ಹೌದು.. ಇದು ನನ್ನ ತಪ್ಪೇ ಎಂದು ನಾನು ಹಲವು ವರ್ಷಗಳನ್ನು ಕಳೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

11ನೇ ತರಗತಿ ಕಳೆದರೂ ಕಿರುಕುಳ ನಿಲ್ಲಲಿಲ್ಲ. ನನ್ನ ದ್ವಿಚಕ್ರ ವಾಹನದ ಬ್ರೇಕ್​ ವೈರ್​ಗಳನ್ನು ಕತ್ತರಿಸಿ, ಅದರ ಮೇಲೆ ಹುಚ್ಚುಚ್ಚಾಗಿ ಬರಹಗಳನ್ನು ಬರೆಯುತ್ತಿದ್ದರು. ಇದನ್ನು ಮತ್ತೆ ಉಪನ್ಯಾಸಕರ ಗಮನಕ್ಕೆ ತಂದಿದ್ದೆ. ಅದಕ್ಕೆ ಅವರು, ನೀನು ಆಧುನಿಕ ರೀತಿಯ ಜೀನ್ಸ್‌ ಧರಿಸಿ ಸ್ಕೂಟಿಯಲ್ಲಿ ಓಡಾಡುತ್ತಿರುವೆ ಎಂದರು. ಆಗ ನಾನು ಇದು ನನ್ನ ತಪ್ಪು ಎಂದು ಯೋಚಿಸಿದೆ ಎಂದು ಸೆಲಿನಾ ಹೇಳಿದ್ದಾರೆ.

ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಅವಕಾಶ ನೀಡದಂತೆ ಎಚ್ಚರವಹಿಸಿ ಎಂದು ಹೇಳುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಯಾರೂ ಹುಡುಗರಿಗೆ ಹಾಗೆ ಮಾಡಬೇಡ ಎಂದು ಹೇಳುವುದಿಲ್ಲ ಎಂದು ಅವರು ವಿಷಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net