

ಕೋಲಾರ: ದೇಶದ ಏಕೈಕ, ಪ್ರತಿಷ್ಠಿತ ಐ ಫೋನ್ ಫ್ಯಾಕ್ಟರಿ ನರಸಾಪುರದ ವಿಸ್ಟ್ರಾನ್. ಸಾವಿರಾರು ಕೈಗಳಿಗೆ ಉದ್ಯೋಗ ನೀಡಿದ್ದ ಈ ಕೈಗಾರಿಕೆಯು ಮೂರ್ನಾಲ್ಕು ತಿಂಗಳಿನಿಂದ ತನ್ನ ಸಿಬ್ಬಂದಿಗೆ ವೇತನ ಪಾವತಿಸಿಲ್ಲ. ಸಿಟ್ಟಿಗೆದ್ದ ಅದೇ ಕೈಗಳು ಫ್ಯಾಕ್ಟರಿ ಮೇಲೆ ಕಲ್ಲು ಎಸೆದು, ದಾಂಧಲೆ ನಡೆಸಿ ಪೀಠೋಪಕರಣ ಮತ್ತು ಕಾರನ್ನು ಪುಡಿಗೈದಿವೆ. ಕಾರ್ಖಾನೆಗೆ ಬೆಂಕಿ ಹಚ್ಚಿವೆ.
ಈ ದಾಂಧಲೆ ಶನಿವಾರ ಬೆಳಗ್ಗೆ ಸಂಭವಿಸಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡಿರುವ ತೈವಾನ್ ಮೂಲದ ವಿಸ್ಟ್ರಾನ್ ಇನ್ ಫೋ ಕಾಮ್ ಪ್ರೈ.ಲಿ. ಆ್ಯಪಲ್ ಕಂಪನಿಯ ಸಹಯೋಗದಲ್ಲಿ ಸುಮಾರು 2900 ಕೋಟಿ ರೂ. ಹೂಡಿಕೆಯೊಂದಿಗೆ ಐ ಫೋನ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣ ಉತ್ಪಾದನೆ ಆರಂಭಿಸಿದೆ. ಸುಮಾರು 43 ಎಕರೆ ಪ್ರದೇಶದಲ್ಲಿರುವ ಈ ಘಟಕದಲ್ಲಿ ಐ ಫೋನ್ ಎಸ್ ಇ 2020 ಉತ್ಪನ್ನವನ್ನು ತಯಾರಿಸಲಾಗುತ್ತಿತ್ತು. ಸುಮಾರು 10,000 ಕಾರ್ಮಿಕರು ವಿಸ್ಟ್ರಾನ್ ಫ್ಯಾಕ್ಟರಿಯಲ್ಲಿ ಹಗಲು, ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಸ್ಥಳೀಯರಿಗೆ ಗುತ್ತಿಗೆ ಆಧಾರದಲ್ಲಿ 4ನೇ ದರ್ಜೆಯ ಕೆಲಸ ನೀಡಿ ಹೊರ ರಾಜ್ಯದವರಿಗೆ ಕಾಯಂ ಉದ್ಯೋಗಾವಕಾಶ ನೀಡುತ್ತಿರುವ ಬಗ್ಗೆ ಕಾರ್ಮಿಕರಲ್ಲಿ ಆರಂಭದಿಂದಲೂ ಅಸಮಾಧಾನ ಇತ್ತು. ಇದರ ನಡುವೆ ಕಾರ್ಮಿಕರಿಗೆ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ವೇತನ ನೀಡದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಡಿ.12ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು.
ಕಾರ್ಮಿಕರು ಸಮಸ್ಯೆಯನ್ನು ಕುಳಿತು ಬಗೆಹರಿಸಿಕೊಳ್ಳಬಹುದಾಗಿತ್ತು. ಕಾನೂನು ಉಲ್ಲಂಘನೆ ಸರಿಯಿಲ್ಲ, ಘಟನೆಗೆ ಕಾರಣ ಹುಡುಕುತ್ತಿದ್ದೇವೆ. ಕಂಪನಿಯಲ್ಲಿ ಸಾಕಷ್ಟು ಹಾನಿಯಾಗಿದೆ. ಕೃತ್ಯವೆಸಗಿರುವ ಬಗ್ಗೆ ಕೆಲ ದಾಖಲೆಗಳು ಸಿಕ್ಕಿವೆ. ಬೆಂಗಳೂರು, ಕೆಜಿಎಫ್ ಭಾಗದಿಂದಲೂ ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. 10 ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅನೇಕರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಐಜಿಪಿ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.