ಮದ್ವೆ ಆಗಲು ಯುವಕರಿಗೆ ಹೆಣ್ಣು ಸಿಗ್ತಿಲ್ಲ: ಸಮಸ್ಯೆ ಪರಿಹಾರಕ್ಕೆ ಎಚ್​ಡಿಕೆ ಬಳಿ ವಿಚಿತ್ರ ಬೇಡಿಕೆ ಇಟ್ಟ ಕೋಲಾರದ ಯುವಕ!

hdk
Published on

ಕೋಲಾರ: ಆದಿಚುಂಚನಗಿರಿ ಮಠದ ಆವರಣದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶ ಭಾರೀ ಸುದ್ದಿಯಾಗಿತ್ತು. ವಧು-ವರರ ಅನ್ವೇಷಣೆಯಲ್ಲಿ ಸುಮಾರು 13 ಸಾವಿರ ವರರು ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ವಧುಗಳ ನೋಂದಣಿ ಸಂಖ್ಯೆ ಕೇವಲ 250! ಈ ಸಮಾರಂಭದ ದೃಶ್ಯ ಕೂಡ ವೈರಲ್​ ಆಗಿತ್ತು. ಒಕ್ಕಲಿಗರಲ್ಲಿ ವಧುಗಳ ಕೊರತೆ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಭಾರೀ ಚರ್ಚೆಗೀಡು ಮಾಡಿತ್ತು. ಯುವ ರೈತರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ ಎಂಬ ಅಳಲು ಕೇಳಿಬಂದಿತ್ತು. ಇದೀಗ ಈ ಬಗ್ಗೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಖುದ್ದು ಯುವ ರೈತನೊಮ್ಮ ಅಳಲು ತೋಡಿಕೊಂಡು, ಮನವಿ ಪತ್ರವನ್ನೂ ಕೊಟ್ಟಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಯನ್ನು ಎಚ್ ಡಿ.ಕುಮಾರಸ್ವಾಮಿ ನಡೆಸುತ್ತಿದ್ದಾರೆ. ಇಂದು(ಸೋಮವಾರ) ಎಚ್​ಡಿಕೆ ಅವರನ್ನು ಭೇಟಿಯಾದ ಮುದುವತ್ತಿ ಗ್ರಾಮದ ಯುವಕ ಧನಂಜಯ, ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ಮದುವೆಯಾಗಲು ವಧುಗಳೇ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಕೋಲಾರ ಜಿಲ್ಲೆಯ ಹೆಣ್ಣುಮಕ್ಕಳನ್ನು ಬೇರೆ ಜಿಲ್ಲೆಯ ವರನಿಗೆ ಕೊಟ್ಟು ಮದುವೆ ಆಗುವುದನ್ನ ನಿಷೇಧಿಸಬೇಕು. ಬೇರೆ ಜಿಲ್ಲೆಯ ಅನುಕೂಲಸ್ಥ ವರನಿಗೆ ಇಲ್ಲಿನ ವಧುವನ್ನ ಕೊಡಬಾರದು. ಆಗ ಮಾತ್ರವೇ ಕೋಲಾರ ಜಿಲ್ಲೆಯ ಯುವಕರಿಗೆ ಮದುವೆ ಭಾಗ್ಯ ಸಿಗಲಿದೆ ಎಂದು ಮನವಿ ಪತ್ರದಲ್ಲಿ ಧನಂಜಯ ವಿವರಿಸಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗುವುದು ಖಚಿತ. ಹಾಗಾಗಿ ಜೆಡಿಎಸ್​ ಸರ್ಕಾರದಲ್ಲಿ ನಮ್ಮ ಈ ವಿಶೇಷ ಮನವಿಯನ್ನ ಪುರಸ್ಕರಿಸಿ ನಿಯಮ ಜಾರಿ ಮಾಡಲಿದ್ದಾರೆ. ಮದುವೆ ವಯಸ್ಸು ಮೀರುತ್ತಿದ್ದರೂ ಇಲ್ಲಿನ ಯುವಕರಿಗೆ ವಧು ಸಿಗುತ್ತಿಲ್ಲ ಎಂದು ಧನಂಜಯ ಹೇಳಿದರು. ಇದು ವಿಚಿತ್ರ ಅನ್ನಿಸಿದರೂ ಸಾಮಾಜಿಕ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದೆ ಧನಂಜಯರ ಪತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net