

ಕೋಲಾರ: ಸತತ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ರೈತರು ಟೊಮ್ಯಾಟೊ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡಿರುವ ವ್ಯಾಪಾರಿಗಳು, ದಲ್ಲಾಳಿಗಳು "ಕೋಲಾರ ಟೊಮ್ಯಾಟೊ' ಬ್ರಾಂಡ್ಗೆ ಮಸಿಬಳಿಯುವ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ನಾಸಿಕ್, ಲಾತೂರ್ ನಿಂದ ನಿತ್ಯ 40 ರಿಂದ 50 ಲೋಡ್ ಉತ್ಪನ್ನ ತರಿಸಿ ಕೋಲಾರ ಮಾರುಕಟ್ಟೆಯಲ್ಲಿ ಬಾಕ್ಸ್ಗಳಿಗೆ ಬದಲಿಸಿ ಕೋಲಾರ ಟೊಮ್ಯಾಟೊ ಎಂದೇಳಿ ಕೇರಳ, ತಮಿಳುನಾಡಿಗೆ ಸರಬರಾಜು ಮಾಡುತ್ತಿದ್ದಾರೆ.
ಜಿಲ್ಲೆಯು ಟೊಮ್ಯಾಟೊ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಆದರೆ ಇದೇ ಮೊದಲ ಬಾರಿಗೆ ಸ್ಥಳಿಯ ರೈತರಿಂದ ಶೇ.5ಕ್ಕಿಂತ ಕಡಿಮೆ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಕಳೆದ ಅಕ್ಟೋಬರ್, ನವೆಂಬರ್ನಲ್ಲಿ ಅತಿವೃಷ್ಟಿ ಮತ್ತು ಸತತ 2 ವರ್ಷದಿಂದ ಬೆಲೆ ಸಿಗದೆ ಕಷ್ಟ, ನಷ್ಟದ ಪಾಲಾಗಿದ್ದರಿಂದ ಬೆಳೆಗಾರರು ಟೊಮ್ಯಾಟೊ ಬೆಳೆಯಲು ಹಿಂದೇಟು ಹಾಕಿದ್ದರು. ಇದರ ಪರಿಣಾಮ ಪ್ರಸ್ತುತ ಜಿಲ್ಲೆಯ ಜನರು ತಿನ್ನುವುದಕ್ಕೂ ಸ್ಥಳಿಯ ಟೊಮ್ಯಾಟೊ ಸಿಗದಂತಾಗಿದೆ.
40 ಸಾವಿರ ಕ್ವಿಂಟಾಲ್ ಟೊಮ್ಯಾಟೊ ಸರಬರಾಜು: ಮೇ ತಿಂಗಳಿನಿಂದ ನವೆಂಬರ್ ವರೆಗೆ ಟೊಮ್ಯಾಟೊ ಸುಗ್ಗಿ (ಸೀಸನ್) ಜಿಲ್ಲೆಯಲ್ಲಿರುತ್ತದೆ. ಆಗ ಸ್ಥಳಿಯ ಮಾರುಕಟ್ಟೆಗೆ ನಿತ್ಯ 30ರಿಂದ 40ಸಾವಿರ ಕ್ವಿಂಟಾಲ್ ಟೊಮ್ಯಾಟೊ ಸರಬರಾಜಾಗುತ್ತದೆ. ಇಲ್ಲಿಂದ ಶ್ರೀಲಂಕಾ, ಬಾಂಗ್ಲಾ, ಥೈಲ್ಯಾಂಡ್ ಮತ್ತಿತರ ದೇಶಗಳಿಗೆ ಹಾಗೂ ಜಮ್ಮು&ಕಾಶ್ಮೀರ, ಹರಿಯಾಣ, ಉತ್ತರಪ್ರದೇಶ, ಒಡಿಶಾ, ನವದೆಹಲಿ, ಛತ್ತೀಸ್ಘಡ, ಪಶ್ಚಿಮ ಬಂಗಾಳ, ರಾಜಸ್ಥಾನ, ತಮಿಳುನಾಡು, ಕೇರಳ ಸೇರಿ ದೇಶದ ಮೂಲೆ ಮೂಲೆಗೆ ಕಳುಹಿಸಲಾಗುತ್ತದೆ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಕೇರಳ, ತಮಿಳುನಾಡಿಗೂ ಕಳುಹಿಸುವಷ್ಟು ಉತ್ಪನ್ನ ಸಿಗದಂತಾಗಿದೆ.
ಒಪ್ಪಂದದಂತೆ ಸತತ ಸರಬರಾಜು ಮಾಡುವ ಕಾರಣ ನಿತ್ಯ ಐದಾರು ಸಾವಿರ ಕ್ವಿಂಟಾಲ್ ಉತ್ಪನ್ನವನ್ನು ಮಹಾರಾಷ್ಟ್ರ ಮತ್ತಿತರ ಕಡೆಯಿಂದ ತರಿಸಿಕೊಂಡು "ಕೋಲಾರ ತಮಿಳುನಾಡು, ಕೇರಳಕ್ಕೆ ಕಳುಹಿಸಿಕೊಡುತ್ತಿದ್ದೇವೆ ಎಂದು ವ್ಯಾಪಾರಿಗಳು ಸಮಜಾಯಿಷಿ ನೀಡುತ್ತಾರೆ. ನಾಸಿಕ್ನಲ್ಲಿ 28 ಕೆಜಿ ಬಾಕ್ಸ್ಗೆ 70ರೂ.ನೀಡಿ, 180ರೂ.ಬಾಡಿಗೆ ಕೊಟ್ಟು ಕೋಲಾರಕ್ಕೆ ತರಿಸಬೇಕು. ಇಲ್ಲಿ ಬಾಕ್ಸ್ ಬದಲಿಸುವಾಗ 10ಕೆಜಿಯಷ್ಟು ಉತ್ಪನ್ನ ಹಾಳಾಗಿರುತ್ತದೆ. ಕೋಲಾರ ಮಾರುಕಟ್ಟೆಯಲ್ಲಿ 250ರೂ. ಮೇಲೆ ಮಾರಾಟವಾದರೆ ಮಾತ್ರ ಲಾಭಾಂಶ ನಿರೀಕ್ಷಿಸಬಹುದಾಗಿದೆ ಎಂದು ಸಬೂಬು ಹೇಳುತ್ತಾರೆ. ನಷ್ಟದ ವ್ಯಾಪಾರ ಏಕೆ ಮಾಡುತ್ತೀರಿ ಎಂದರೆ ಯಾರ ಬಳಿಯೂ ಉತ್ತರವಿರುವುದಿಲ್ಲ.
ಸ್ಥಳಿಯ ರೈತರ ಬದುಕಿಗೆ ಕೊಳ್ಳಿ: ಕೋಲಾರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿಗೆ ಇದ್ದಾಗ ಕಳಪೆ ಮಟ್ಟದ ಟೊಮ್ಯಾಟೊವನ್ನು ಮಹಾರಾಷ್ಟ್ರ, ಛತ್ತಿಸ್ಗಢ ಮತ್ತಿತರ ಕಡೆಯಿಂದ ಕಡಿಮೆ ಬೆಲೆಗೆ ತರಿಸಿಕೊಂಡು ಕೋಲಾರ ಟೊಮ್ಯಾಟೊ ಜತೆ ಸೇರಿಸಿ ದೇಶದ ನಾನಾ ಕಡೆ "ಕೋಲಾರ ಟೊಮ್ಯಾಟೊ' ಹೆಸರಲ್ಲಿ ಕಳುಹಿಸುತ್ತಿರುವುದು ಗುಟ್ಟಾದ ವಿಷಯವೇನಲ್ಲ. ಈಗಲೂ ಕೋಲಾರದಲ್ಲಿ ಮಳೆಯಿಂದ ಗುಣಮಟ್ಟದ ಉತ್ಪನ್ನ ಸಿಗುತ್ತಿಲ್ಲ ಎಂದೇಳಿ ಕೇರಳ, ತಮಿಳುನಾಡಿನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಸೀಸನ್ನಲ್ಲೂ ಬೆಲೆ ಸಿಗದೆ ಹೋಗಲು ಇದೇ ಪ್ರಮುಖ ಕಾರಣ. ಸ್ಥಳಿಯ ರೈತರು ಸತತ ನಷ್ಟ ಹೊಂದುತ್ತಿದ್ದರೂ, ಮಾರುಕಟ್ಟೆ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ರೈತರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ ಎಂಬುದು ರೈತ ಮುಖಂಡರ ಅಭಿಪ್ರಾಯವಾಗಿದೆ.
ಮಹಾರಾಷ್ಟ್ರದಿಂದ ಹೆಚ್ಚು ಸರಬರಾಜು ನವೆಂಬರ್ನಲ್ಲಿ ಸ್ಥಳಿಯ ಉತ್ಪನ್ನದ ಜತೆ ಆಂಧ್ರದ ಮಲಕಲಚೆರುವು, ರಾಜ್ಯದ ಚಳ್ಳಕೆರೆಯಿಂದ ತರಿಸಿಕೊಂಡು 9ರಿಂದ 10ಸಾವಿರ ಕ್ವಿಂಟಾಲ್ ಉತ್ಪನ್ನವನ್ನು ನೆರೆಯ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತಿತ್ತು. ಸೆಪ್ಟೆಂಬರ್ನಲ್ಲಿ ಕೆಜಿ ಟೊಮ್ಯಾಟೊ ಗರಿಷ್ಠ 40 ರೂ. ಇದ್ದಿದ್ದು, ಹೊರಗಿನ ಟೊಮ್ಯಾಟೊ ತರಿಸಿಕೊಂಡ ಮೇಲೆ ನವೆಂಬರ್ನಲ್ಲಿ ಕೆಜಿಗೆ 13ರೂ.ಗೆ ಇಳಿಯಿತು. ಡಿಸೆಂಬರ್ ಮೊದಲ ವಾರದಲ್ಲಿ ಗರಿಷ್ಠ ಕೆಜಿಗೆ 20ರೂ.(ಬಾಕ್ಸ್ಗೆ 300ರೂ.) ಇದ್ದಿದ್ದು, ನಾಸಿಕ್ ಟೊಮ್ಯಾಟೊ ತರಿಸಿಕೊಳ್ಳುತ್ತಿದ್ದಂತೆ ಕೆಜಿಗೆ 12ರೂ.(ಬಾಕ್ಸ್ 175 ರೂ.) ಗೆ ಇಳಿದಿದೆ. ಪ್ರಸ್ತುತ 6 ಸಾವಿರ ಕ್ವಿಂಟಾಲ್ ಟೊಮ್ಯಾಟೊ ಮಾರುಕಟ್ಟೆಗೆ ಸರಬರಾಜಾಗುತ್ತಿದ್ದು, ಬಹುತೇಕ ಉತ್ಪನ್ನ ಮಹಾರಾಷ್ಟ್ರದ್ದಾಗಿದೆ.
ನಾಸಿಕ್ ಮತ್ತಿತರ ಕಡೆಯಿಂದ ಟೊಮ್ಯಾಟೊ ತರಿಸುವುದಕ್ಕೆ ನಮ್ಮ ವಿರೋಧವಿದೆ. ಸ್ಥಳಿಯ ರೈತರು ಸೀಸನ್ನಲ್ಲೂ ಮೂರು ಕಾಸು ನೋಡಲಾಗಲಿಲ್ಲ. ಮಾರುಕಟ್ಟೆಯಲ್ಲಿ ಬೆಲೆ ಸಿಗದಂತೆ ಮಾಡುವುದು, ಬೇರೆ ಕಡೆಯಿಂದ ಕಡಿಮೆ ಬೆಲೆಗೆ ಉತ್ಪನ್ನ ತರಿಸಿಕೊಂಡು ಬೇಡಿಕೆ ಇರುವ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಿ ದಲ್ಲಾಳಿಗಳು ಧನಿಕರಾಗುತ್ತಿದ್ದಾರೆ. ಇದಕ್ಕೆ ಮಾರುಕಟ್ಟೆ ಅಧಿಕಾರಿಗಳ ಕುಮ್ಮಕ್ಕಿದೆ. | ಜಿ.ನಾರಾಯಣಸ್ವಾಮಿ, ಮುಖಂಡ, ರೈತಸಂಘ (ಎಂಡಿಎನ್ ಬಣ), ಕೋಲಾರ ಸ್ಥಳಿಯವಾಗಿ ಗುಣಮಟ್ಟದ ಮತ್ತು ಬೇಡಿಕೆ ಪೂರೈಸುವಷ್ಟು ಟೊಮ್ಯಾಟೊ ಸಿಗುತ್ತಿಲ್ಲ. ಕೆಲವು ಕಮಿಷನ್ ಏಜೆಂಟರು ನಾಸಿಕ್, ಆಂಧ್ರದ ಮಲಕಲಚೆರುವು ಕಡೆಯಿಂದ ಉತ್ಪನ್ನ ತರಿಸಿಕೊಂಡು ಬೇಡಿಕೆ ಇರುವ ಕಡೆ ಕಳುಹಿಸುತ್ತಿದ್ದಾರೆ. ಬೇರೆ ಕಡೆ ರೈತರು ಟೊಮ್ಯಾಟೊ ತಂದು ಇಲ್ಲಿ ಮಾರಬಾರದೆಂದು ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ. | ಎನ್.ವಿಜಯಲಕ್ಷ್ಮೀ, ಕಾರ್ಯದರ್ಶಿ, ಎಪಿಎಂಸಿ, ಕೋಲಾರ.