

ಕಿರುವಾರ ಎಸ್.ಸುದರ್ಶನ್ ಕೋಲಾರ
ಕೋಲಾರ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ತೀವ್ರ ಕಸರತ್ತು ನಡೆಸುತ್ತಿದೆ.
ಅಧ್ಯಕ್ಷ ಸ್ಥಾನ ಬಿಸಿಎಂ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ (ಮಹಿಳೆ)ಗೆ ಮೀಸಲಾತಿ ನಿಗದಿಯಾದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿಗಳಾದ ನಜೀರ್ ಅಹ್ಮದ್, ಅನಿಲ್ಕುಮಾರ್ ಕಸರತ್ತು ಆರಂಭಿಸಿದ್ದಾರೆ.
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಜೆಡಿಎಸ್ 8, ಪಕ್ಷೇತರ 8, ಎಸ್ಡಿಪಿಐ 4 ಹಾಗೂ ಕಾಂಗ್ರೆಸ್ 12 ಹಾಗೂ ಬಿಜೆಪಿಯ 3 ಸದಸ್ಯರಿದ್ದಾರೆ. ಜೆಡಿಎಸ್, ಎಸ್ಡಿಪಿಐ ಹಾಗೂ ಪಕ್ಷೇತರ ಮೈತ್ರಿಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಶ್ವೇತಾ ಶಬರೀಶ್ ಹಾಗೂ ಉಪಾಧ್ಯಕ್ಷರಾಗಿ ಪ್ರವಿಣ್ಗೌಡ ಅಧಿಕಾರದಲ್ಲಿದ್ದರು.
ವಿಧಾನಸಭೆ ಚುನಾವಣೆಯ ನಂತರ ಹಲವು ಸದಸ್ಯರು ಪಾಂತರ ಮಾಡಿದ್ದು, ರಾಜಕೀಯ ಚಿತ್ರಣವೇ ಬದಲಾಗಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್ ತೀವ್ರ ಲಾಬಿ ನಡೆಸುತ್ತಿದೆ.
ಜೆಡಿಎಸ್ ಸಂಸದ ಎಂ.ಮಲ್ಲೇಶ್ಬಾಬು, ಎಂಎಲ್ಸಿ ಇಂಚರ ಗೋವಿಂದರಾಜು ಹಾಗೂ ಕಾಂಗ್ರೆಸ್ ಶಾಸಕ ಕೊತ್ತೂರು ಜಿ.ಮಂಜುನಾಥ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್ ಅಹ್ಮದ್ ಸೇರಿ ಒಟ್ಟು 39 ಮತಗಳು ಇವೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ 18 ಕೋರಂ ಬೇಕಿದ್ದು, ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದು ಕುತೂಹಲ ಹೆಚ್ಚಿಸಿದೆ.