ಜಲಮೂಲ ರಕ್ಷಣೆಯಲ್ಲಿ ಕೋಲಾರ ನಂ 1

water award
ಜಲ ಸಿಂಚಾಯ್​ ಜನ ಭಾಗಿದರಿ&-1.0 ಅಭಿಯಾನದಡಿ ಅಭಿವೃದ್ಧಿಪಡಿಸಿರುವ ಕಲ್ಯಾಣಿ.
Published on

ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿ, ಜಲಮೂಲಗಳ ಸಂರಕ್ಷಣೆ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿರುವ ಕೋಲಾರ ಜಿಲ್ಲೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.

ಜಲಮೂಲಗಳಾದ ಕೆರೆ, ಕುಂಟೆ, ಕಲ್ಯಾಣಿಗಳು ಬತ್ತಿದ ಪರಿಣಾಮ ಜಿಲ್ಲೆ ಬಯಲು ಸೀಮೆ ಕೋಲಾರ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು. ಇದರಿಂದ ಹೊರಬರಲು ಸತತ ಒಂದು ವರ್ಷದಿಂದ ಜಲಮೂಲಗಳ ರಕ್ಷಣೆಗೆ ಜಿಲ್ಲಾ ಪಂಚಾಯಿತಿಯಿಂದ ಒತ್ತು ನೀಡುವ ಮೂಲಕ ನೀರಿನ ಸಮಸ್ಯೆ ನಿವಾರಿಸುವಲ್ಲಿ ಭಗಿರಥ ಪ್ರಯತ್ನ ನಡೆಸುತ್ತಿದೆ.

ಜಲ ಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ, ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವುದು, ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಜಲ ಸಂಚಯ್​ ಜನ್​ ಭಾಗಿದರಿ ಅಭಿಯಾನ ವರವಾಗಿದ್ದು, ಸದ್ಯಕ್ಕೆ ಜಲ ಮರುಪೂರಣದಲ್ಲಿ ಜಿಲ್ಲೆ ಸಾಧನೆ ತೋರಿದೆ.

ಅಭಿಯಾನದಡಿ ವಿವಿಧ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆ ಬಹುಮಾನಕ್ಕೆ ಭಾಜನವಾಗಿದೆ. ಜಿಲ್ಲೆಯ ನೂರಾರು ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಪುನಶ್ಚೇತನಗೊಳಿಸಲಾಗಿದ್ದು, ಕರೆಗಳಿಗೆ ಮಳೆ ನೀರು ಹರಿದು ಬರಲು ಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅನುಷ್ಠಾನಗೊಳಿಸಿರುವ ಜಲ ಸಂರಕ್ಷಣಾ ಹಾಗೂ ಅಂತರ್ಜಲ ಹೆಚ್ಚಿಸುವ ಕಾಮಗಾರಿ ಪರಿಶೀಲಿಸಿರುವ ಕೇಂದ್ರ ತಂಡ ಪ್ರಶಸ್ತಿಗೆ ಜಿಲ್ಲೆಯನ್ನು ಆಯ್ಕೆ ಮಾಡಿದೆ.

ಆಯ್ಕೆ ಹೇಗೆ?

ಅಭಿಯಾನದಡಿ ರಾಜ್ಯವನ್ನು 5 ವಲಯಗಳಾಗಿ ವಿಂಗಡಿಸಲಾಗಿತ್ತು. 3ನೇ ವಲಯದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿದ್ದು, ಈ ಪೈಕಿ ಕರ್ನಾಟಕದ 7 ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ಆ ಪೈಕಿ ಬೆಂಗಳೂರು ವಿಭಾಗದಲ್ಲಿ ಕೋಲಾರ ಪ್ರಥಮ ಸ್ಥಾನ ಪಡೆದುಕೊಂಡಿದೆ.

* ಅಭಿಯಾನದ ಮೂಲ ಉದ್ದೇಶ

ಹರಿಯುವ ನೀರನ್ನುನಡೆಯುವಂತೆ ಮಾಡು; ನಡೆಯುವನೀರನ್ನು ನಿಲ್ಲುವಂತೆಮಾಡು;ನಿಂತ ನೀರನ್ನುಇಂಗುವಂತೆ ಮಾಡು ಎಂಬ ಜಲ ಸಂರಕ್ಷಣೆಯ ಸಂದೇಶದಂತೆ, ಗ್ರಾಮೀಣ ಪ್ರದೇಶದಲ್ಲಿ ಜಲ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜಲ ಸಂಚಯ್​ ಜನ್​ ಭಾಗಿದರಿ 1.0 ಅಭಿಯಾನದಡಿ ಜಲ ಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ ಮೂಲಕ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದು ಅಭಿಯಾನ ಮೂಲ ಉದ್ದೇಶವಾಗಿದೆ.

* ಕೈಗೊಂಡಿದ್ದ ಕಾಮಗಾರಿ

ಜಲ ಸಂರಕ್ಷಣೆಗಾಗಿ ನೀರು ಹರಿದು ಹೋಗುವ ನಾಲೆ- ಕಾಲುವೆಗಳ ಪುನಶ್ಚೇತನ, ಕೆರೆ- ಕಟ್ಟೆಗಳ ಅಭಿವೃದ್ಧಿ, ಗೋ ಕಟ್ಟೆ ನಿಮಾರ್ಣ, ಕಲ್ಯಾಣಿಗಳ ಜೀಣೋರ್ದ್ಧಾರ, ಚೆಕ್​ಡ್ಯಾಂ, ತೆರೆದ ಬಾವಿ ನಿಮಾರ್ಣ, ಸೋಕ್ಪಿಟ್​, ಕಂದ ಬದು ನಿಮಾರ್ಣ, ಕೃಷಿ ಹೊಂಡ, ಅರಣ್ಯೀಕರಣ, ಮಳೆನೀರು ಕೊಯ್ಲು ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಮೂಲಕ ಮೂಲಕ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಹೆಚ್ಚಿಸಿಲು ಕ್ರಮ ವಹಿಸಿದೆ.

* 10,270 ಕಾಮಗಾರಿ ಅನುಷ್ಠಾನ

ಜಲ ಸಂಚಯ್​ ಜನ್​ ಭಾಗಿದರಿ&-1.0 ಅಭಿಯಾನದಡಿ 2024&-25ನೇ ಸಾಲಿನಲ್ಲಿ ಜಿಲ್ಲೆಯ 1,825 ಗ್ರಾಮಗಳಲ್ಲಿ 9,125 ಕಾಮಗಾರಿಕೈಗೊಳ್ಳಲು ಗುರಿ ನೀಡಲಾಗಿತ್ತು. ಜಿಲ್ಲೆ ಎಲ್ಲ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಮೂಲಕ ಒಟ್ಟು 10,270 ಜಲ ಸಂರಕ್ಷಣೆ ಕಾಮಗಾರಿ ಅನುಷ್ಠಾನಗೊಳಿಸಿದ್ದು, ಜಲ ಸಂಚಯ್​ ಜನ್​ ಭಾಗಿದರಿ ಪೋರ್ಟಲ್​ನಲ್ಲಿ ದಾಖಲಿಸಲಾಗಿತ್ತು. ಗುರಿ ಮೀರಿ ಸಾಧನೆ ಮಾಡಿದ ಜಿಲ್ಲೆಯನ್ನು ಕೇಂದ್ರ ಜಲಶಕ್ತಿ ಮಂತ್ರಾಲಯ ಗುರುತಿಸಿ, ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿ 25 ಲಕ್ಷ ರೂ. ನಗದು ಹಾಗೂ ಪಾರಿತೋಷಕವೊಳಗೊಂಡಿದ್ದು, ಪ್ರದಾನ ಮಾಡಲಾಗುವುದು.

ಕೋಟ್​....

ಜನರಿಗೆ ನೀರಿನ ಮಹತ್ವ, ಸಂರಕ್ಷಣೆ ವಿಧಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಪಶಸ್ತಿ ಲಭಿಸಿದೆ. ಯಾವುದೇ ನದಿಮೂಲಗಳು ಇಲ್ಲದೆ ಇರುವುದರಿಂದ ಪರಿಣಾಮಕಾರಿಯಾಗಿ ಅಂತರ್ಜಲ ಅನುಷ್ಠಾನಗೊಳಿಸಲಾಗಿದೆ. ಅಧಿಕಾರಿಗಳ ಶ್ರಮಿದಿಂದ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ.

- ಡಾ.ಪ್ರವಿಣ್​, ಪಿ ಬಾಗೇವಾಡಿ, ಸಿಇಒ, ಜಿಪಂ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net